ಚಾಮರಾಜನಗರ: ಜನ್ ಭಾಗೀದಾರಿ ಸಬ್ಸೆ-ಡೋರ್ ಸಬ್ಸೆ-ಪೆಹಲೆ ಅಭಿಯಾನವನ್ನು ಇಂದು ಚಾಮರಾಜನಗರ ತಾಲೂಕಿನ ಪರಿಶಿಷ್ಟ ಪಂಗಡ ಸಮುದಾಯದ ಹೆಚ್ಚು ಜನರ ವಾಸವಾಗಿರುವ ಕಣ್ಣೇಗಾಲ, ಯಾನಗಳ್ಳಿ, ಮೇಲ್ ಮಾಳ, ಬೇಡಗುಳಿ ಗ್ರಾಮದಲ್ಲಿ ಆರಂಭಿಸಲಾಯಿತು.
ಗ್ರಾಮಗಳಲ್ಲಿ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಸಿಕಲ್ ಸೆಲ್ ಅನಿಮೀಯ ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷಿಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವ ಸಂಬಂಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮ ಮಟ್ಟದಲ್ಲಿ ಅರಿವು ಹಾಗೂ ಸೌಲಭ್ಯ ಕುರಿತ ಶಿಬಿರಗಳ ಆಯೋಜನೆ ಹಾಗೂ ಪಿಎಂ ಜನ್ ಮನ್ ಹಾಗೂ ದರ್ತಿ ಅಬಾ ಜನ್ ಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಅದರಂತೆ ಜನ್ ಭಾಗೀದಾರಿ ಸಬ್ಸೆ-ಡೋರ್ ಸಬ್ಸೆ-ಪೆಹಲೆ ಅಭಿಯಾನ ಸಹ ಮೇ 25ರವರೆಗೆ ಆಯೋಜಿತವಾಗಿದೆ.
ಕಾರ್ಯಕ್ರಮದಲ್ಲಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ, ಅಧೀಕ್ಷಕರಾದ ಸುರೇಶ್, ವೈದ್ಯಾಧಿಕಾರಿಗಳಾದ ಡಾ. ಶಿವಕುಮಾರ್, ಆಹಾರ ಇಲಾಖೆ ಇನ್ಸ್ ಪೆಕ್ಟರ್ ಚಿಕ್ಕಣ್ಣ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದಪ್ಪ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Related