- ರಾಜೀವ್ ಗಾಂಧಿ ಅವರ ಕೊಡುಗೆ ಅನನ್ಯ: ಮಹಮ್ಮದ್ ಅಸ್ಗರ್
ಚಾಮರಾಜನಗರ:ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿಯ ಕಾರ್ಮಿಕ ಘಟಕ ಹಮ್ಮಿಕೊಂಡಿರುವ `ರಾಜೀವ್ ಜ್ಯೋತಿ ಯಾತ್ರೆಯು ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದು ಭಾನುವಾರ ಬೆಳಿಗ್ಗೆ ತಮಿಳುನಾಡಿಗೆ ಹೊರಟ ಯಾತ್ರೆಗೆ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಬೀಳ್ಕೊಟ್ಟರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರೆಗೆ ಬೀಳ್ಕೊಟ್ಟ ಮಹಮ್ಮದ್ ಅಸ್ಗರ್ ಮಾತನಾಡಿ, ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿ, ದೂರಸಂಪರ್ಕ ವಲಯದ ಅಭಿವೃದ್ಧಿ, 18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಮತ್ತು ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕೋಮುವಾದ, ಭಯೋತ್ಪಾದನೆ, ಅಶಾಂತಿ ತೊಲಗಿಸುವಲ್ಲಿ ರಾಜೀವ್ ಗಾಂಧಿ ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವುದು. ನಕ್ಸಲ್‌ವಾದ ತಡೆಯುವಲ್ಲಿ ರಾಷ್ಟ್ರದ ಪೊಲೀಸ್ ಪಡೆಗಳೊಂದಿಗೆ ನಾಗರಿಕರು ಕೈಜೋಡಿಸುವಂತೆ ಮಾಡುವುದೂ ಈ ಯಾತ್ರೆಯ ಉದ್ದೇಶವಾಗಿದೆ ಎಂದರು.
ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಆರ್.ದೊರೈವೇಲು ಮಾತನಾಡಿ, ಬೆಂಗಳೂರುದಿಂದ ಮೇ 15ರಂದು ಕಳೆದ 35 ವರ್ಷಗಳಿಂದ ಹೊರಡಿಸಲಾಗುತ್ತಿರುವ ರಾಜೀವ್ ಜ್ಯೋತಿ ಯಾತ್ರೆ ರಾಜೀವ್ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲು ರಾಜೀವ್ ಜ್ಯೋತಿ ಯಾತ್ರೆ ನೆಲಮಂಗಲ, ಕುಣಿಗಲ್, ಯಡಿಯೂರು, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಕೆ.ಆರ್.ನಗರ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಮೂಲಕ ಸಾಗಿ, ನಂತರ ತಮಿಳುನಾಡಿಗೆ ಸತ್ಯಮಂಗಲಂ, ಕೊಯಮತ್ತೂರು, ಅವಿನಾಶ್, ಪೆರುಮನಲ್ಲೂರು, ಈರೋಡ್, ಭವಾನಿ, ಸೇಲಂ, ಅತ್ತೂರು, ಧರ್ಮಪುರಿ, ಕೃಷ್ಣಗಿರಿ, ತಿರುಪ್ಪತ್ತೂರು, ಉತ್ತಂಗರಾಲ್, ಸಿಂಗಾರಪೇಟೆ, ಚೆಂಗಂ, ತಿರುವಣ್ಣಾಮಲೈ, ಜಿಂಜೀ, ತಿಂದಿವನಂ ಮೂಲಕ ಪ್ರವೇಶಿಸಿ ಪಾಂಡಿಚೇರಿಗೆ ಪ್ರವೇಶಿಸುತ್ತದೆ. ರಾಜೀವ್ ಜ್ಯೋತಿ ಯಾತ್ರೆ ಚೆನ್ನೈಗೆ ಮೇ 21
ರಂದು ಶ್ರೀಪೆರಂಬದೂರಿನಲ್ಲಿ ಸಮಾಪ್ತಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಾಗರತ್ನ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಪದ್ಮಪುರುಷೋತ್ತಮ, ಕಾಗಲವಾಡಿ ಚಂದ್ರ, ನಾಗಯ್ಯ, ರೂಪೇಶ್, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ಎ.ಎಚ್. ನಸ್ರುಲ್ಲಾ ಖಾನ್, ನಾಗರಾಜು, ಕುಮಾರ್ ಇತರರು ಭಾಗವಹಿಸಿದ್ದರು.