ಬೆಂಗಳೂರು : ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ
ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ “ಸಿದ್ದು ಪೂರ್ಣಚಂದ್ರ” ಇದೀಗ
`ಪುಟ್ಟಣ್ಣನ ಕತ್ತೆ’ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು
ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಈ ಚಿತ್ರವೀಗ ಪ್ರತಿಷ್ಠಿತ
ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಆಸ್ಟ್ರೇಲಿಯಾದ
ಮೆಲ್ಬೋರ್ನ್ ದಲ್ಲಿ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ವಿಶಿಷ್ಟ ಕಥೆ
ಹೊಂದಿರೋ ‘ಪುಟ್ಟಣ್ಣನ ಕತ್ತೆ’ ಚಿತ್ರ ಪ್ರದರ್ಶನಗೊಳ್ಳಲಿದೆ.
ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಜಾಗತಿಕ ಮಟ್ಟದಲ್ಲಿ ಘನತೆ ಗೌರವಗಳಿವೆ.
ಆ ಸಿನಿಮೋತ್ಸವದಲ್ಲಿ ಸಿನಿಮಾವೊಂದು ಆಯ್ಕೆಯಾಗೋದೇ ಪ್ರಶಸ್ತಿಗೆ ಸಮ
ಎಂಬಂಥಾ ವಾತಾವರಣವೂ ಇದೆ. ಯಾಕೆಂದರೆ, ಜಾಗತಿಕ ಮಟ್ಟದ ತುರುಸಿನ ಸ್ಪರ್ಧೆ
ದಾಟಿಕೊಂಡು ಆಯ್ಕೆಯಾಗೋದು ಗುಣಮಟ್ಟದ ಕಂಟೆಂಟ್ ಹೊಂದಿದ್ದರೆ
ಮಾತ್ರವೇ ಸಾಧ್ಯವಾಗುವ ಸಂಗತಿ. ಈ ನಿಟ್ಟಿನಲ್ಲಿ ಕನ್ನಡ ಸಿನಿಮಾ ‘ಪುಟ್ಟಣ್ಣನ
ಕತ್ತೆ’ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೂ
ಹೆಮ್ಮೆ ತರುವ ವಿಚಾರ.

ಕನ್ನಡದ ಮಟ್ಟಿಗೆ ಕತ್ತೆಯೊಂದನ್ನು ಕೇಂದ್ರವಾಗಿಟ್ಟುಕೊಂಡು
ರೂಪುಗೊಂಡ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ಪುಟ್ಟಣ್ಣನ ಕತ್ತೆ ಚಿತ್ರ
ಪಾತ್ರವಾಗುತ್ತದೆ. ಬೆಂಗಳೂರಿನಂಥಾ ನಗರಗಳಲ್ಲಿ ಕತ್ತೆ ಹಾಲು
ಮಾರುವವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅದ್ಯಾವುದೋ ಹಳ್ಳಿಯೊಂದರಿಂದ
ಹಾಗೆ ಕತ್ತೆಯೊಂದಿಗೆ ಪಟ್ಟಣ ಸೇರಿಕೊಂಡವನ ಸುತ್ತ ಘಟಿಸುವ
ಆಸಕ್ತಿದಾಯಕ ಕಥೆ ಈ ಸಿನಿಮಾದ ಆಂತರ್ಯದಲ್ಲಿದೆ. ಭೀಮೇಶ್ ಗೌಡ ಈ
ಕಥನದ ಆತ್ಮದಂಥಾ ಪುಟ್ಟಣ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಈ
ಸಿನಿಮಾದ ನಾಯಕನಾಗಿ, ಸಂಕೀರ್ಣವಾದೊಂದು ಪಾತ್ರದಲ್ಲಿ ನಟಿಸಿದ್ದಾರೆ.
ಪೂರ್ಣಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ತನ್ಮಯ್ ಎಸ್ ಗೌಡ ನಿರ್ಮಾಣ ಮಾಡಿರುವ,
ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ
ಮಾಡಿದ್ದಾರೆ. ತಾರಾಗಣ್ರದಲ್ಲಿ ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ ರಾಮಸ್ವಾಮಿ,
ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ
ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಮೊದಲಾದವರಿದ್ದಾರೆ. ರಾಜು ಹೆಮ್ಮಿಗೆಪುರ
ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಿ.ಎಸ್ ಸಂಕಲನ,
ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪಿಆರ್ ಓ
ಆಗಿದ್ದಾರೆ.ಈಗಾಗಲೇ ದಾರಿಯಾವುದಯ್ಯ ವೈಕುಂಟಕ್ಕೆ, ಬ್ರಹ್ಮಕಮಲ, ಈ ಪಾದ
ಪುಣ್ಯ ಪಾದ ವಿಶಿಷ್ಟ ಕಥಾ ಚಿತ್ರಗಳನ್ನು ನೀಡಿದ ಸಿದ್ದು ಪೂರ್ಣಚಂದ್ರ ಅವರಿಗೆ
ಪತ್ರಿಕೆಯ ಮೂಲಕ ಶುಭ ಹಾರೈಸೋಣ **
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
