ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಿ: ಡಾ.ಪಿ.ಚಂದ್ರಶೇಖ‌ರ್

ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ

ಚಾಮರಾಜನಗರ: ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ಚಂದ್ರಶೇಖ‌ರ್ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಮಹಿಳಾಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ವತಿಯಿಂದ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ’ ಧ್ಯೇಯ ವಾಕ್ಯದಡಿ, ನಡೆದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಶುಶ್ರೂಷಕರು ಆತ್ಮಹತ್ಯೆಗೆ ಪ್ರಯತ್ನ ಮಾಡುವವರ ಜತೆ ಸಮಾಲೋಚನೆ ನಡೆಸಿ, ಅವರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಬೇಕು, ಆ ಮೂಲಕ‌ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಬೇಕು ಎಂದರು.

ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಸಕಾರಾತ್ಮಕ ಚಿಂತನೆಗಳು ಎಲ್ಲದಕ್ಕೂ ಸೂಕ್ತ ಪರಿಹಾರ ನೀಡುತ್ತವೆ.ಮಾನಸಿಕ ಖಿನ್ನತೆ ಒಂಟಿತನ, ಕೌಟುಂಬಿಕ ಕಲಹ ಇದರಲ್ಲಿ ಸಿಲುಕುವವರು  ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಇಲಾಖೆ ಸಂಗ್ರಹಿಸಿರುವ ಅಂಕಿ ಅಂಕಿಆಂಶಗಳ ಪ್ರಕಾರ ಜುಲೈನಲ್ಲಿ  ಗಂಡುಮಕ್ಕಳು-61 ಹೆಣ್ಣುಮಕ್ಕಳು-66, ಆಗಸ್ಟ್ ನಲ್ಲಿ  ಗಂಡುಮಕ್ಕಳು -66,  ಹೆಣ್ಣು ಮಕ್ಕಳು -70 ಆತ್ಮಹತ್ಯೆಗೆ ಶರಣಾಗಿದ್ದಾರೆ.  ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ,  ಶುಕ್ರವಾರ, ಬುಧವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮನೋಚೈತನ್ಯ‌ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆತ್ಮ ಹತ್ಯೆಗೆ  ಪ್ರಯತ್ನಪಟ್ಟವರ ಜತೆ ಆಪ್ತಸಮಾಲೋಚನೆ ನಡೆಸುವ ಮೂಲಕ  ಅವರ ಸಮಸ್ಯೆಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಮೈಸೂರು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಾನಂದ ಜೆ.ಮನೋಹರ್, ರಕ್ಷಿತಾಪೂಜಾರಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರಾಂಶುಪಾಲ‌ ಜಿ.ವಿನಯಕುಮಾರ್ ಮಾತನಾಡಿದರು.
ಉಪನ್ಯಾಸಕಿ ಹೇಮಾವತಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ನಿಧಿಶ್ರೀ ಪ್ರಾರ್ಥಿಸಿದರು.ದಿವ್ಯ ಸ್ವಾಗತಿಸಿದರು. ಮಾದಲಾಂಬಿಕೆ ವಂದಿಸಿದರು.

Leave a Reply

Your email address will not be published. Required fields are marked *