ಕೆಂಪೇಗೌಡರ ಕೊಡುಗೆ ಅಪಾರ: ಡಾ.ಸಿ.ಎನ್.ಅಶ್ವಥ್ ನಾರಾಯಣ

  • ಚಾಮರಾಜನಗರದಲ್ಲಿ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮ

ಚಾ‌ಮರಾಜನಗರ : ಸಮಾಜದ ಒಳಿತಿಗಾಗಿ, ಮುಂದಿನ ಪೀಳಿಗೆಯನ್ನು ಮುನ್ನಡೆಸಲು ನಾಡಪ್ರಭು ಕೆಂಪೇಗೌಡ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.
    ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ನಡೆದ ಬೆಂಗಳೂರು ನಗರ ನಿರ್ಮಾತೃ  ನಾಡುಪ್ರಭು ಶ್ರೀ ಕೆಂಪೇಗೌಡರವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
  ನಾಡಪ್ರಭು ಕೆಂಪೇಗೌಡರು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಪಾಳೇಗಾರರು. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ಸಂಸ್ಥಾಪಕರು. ಇವರು ಯಲಹಂಕವನ್ನು ಆಳುತ್ತಿದ್ದರು. 1537ರಲ್ಲಿ ಬೆಂಗಳೂರು ಕೋಟೆ ಮತ್ತು ನಗರಕ್ಕೆ ಅಡಿಪಾಯ ಹಾಕಿದರು ಎಂದರು.
   ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಕೆಂಪೇಗೌಡರು ಸುಮಾರು 1,000 ಕೆರೆಗಳನ್ನು ನಿರ್ಮಿಸಿದರು. ಮಳೆ ನೀರನ್ನು ಸಂಗ್ರಹಿಸಲು ಮತ್ತು ರಾಜಕಾಲುವೆಗಳ ಮೂಲಕ ಕೆರೆಗಳನ್ನು ಜೋಡಿಸುವ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದರು.ಅವರ ದೂರ ದೃಷ್ಟಿಯ ಫಲವಾಗಿಯೇ ಬೆಂಗಳೂರು ನಗರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿ ಎಂದರು.
  ವರನಟ ಡಾ.ರಾಜ್ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಜನಿಸಿ ದೇಶಮಟ್ಟದಲ್ಲಿ ಹೆಸರುಗಳಿಸಿದವರು. ಅವರು ನಮ್ಮ ಮಲ್ಲೇಶ್ವರಂ ವಿಧಾನ ಕ್ಷೇತ್ರದಲ್ಲಿ ವಾಸವಾಗಿದ್ದರು. ಚಾಮರಾಜನಗರ ಅಭಿವೃದ್ಧಿ ಹೊಂದಬೇಕು. ಅದಕ್ಕೆ ನಾನು ಕೈ ಜೋಡಿಸುವುದಾಗಿ ತಿಳಿಸಿದರು.
  ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ  ಪ್ರಾಸ್ತಾವಿಕವಾಗಿ ಮಾತನಾಡಿ,  ನಮ್ಮ ಸಂಘಟನೆ ಕನ್ನಡ ನಾಡು, ನುಡಿ,ಜಲ ವಿಚಾರದಲ್ಲಿ ಹೋರಾಟ ಮಾಡುವ ಜೊತೆಗೆ  ರಾಷ್ಟ್ರನಾಯಕರು, ಮಹನೀಯರು ಜಯಂತಿ ಆಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿಕೊಂಡು ಬರಲಾಗಿದೆ ಎಂದರು.
ನಾಡಪ್ರಭು ಕೆಂಪೇಗೌಡರು ದಕ್ಷ ಆಡಳಿತಗಾರು, ದೂರದೃಷ್ಟಿಯುಳ್ಳವರಾಗಿದ್ದು, ಬೆಂಗಳೂರಿನ
ನಾಲ್ಕು ಭಾಗದಲ್ಲಿ ಗೋಪುರಗಳನ್ನು ಕಟ್ಟಿಸಿದ ಕೆಂಪೇಗೌಡರು ಅಂದೇ ಬೆಂಗಳೂರಿನ ಆಡಳಿತ ಹೇಗಿರಬೇಕೆಂದು ಅರಿತು ವೃತ್ತಿ ಆಧಾರಿತವಾಗಿ ನಗರತ್ ಪೇಟೆ, ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿದ್ದರು. ಅವರ ಆಡಳಿತ ನಮಗೆಲ್ಲರಿಗೂ ಮಾದರಿ ಎಂದರು.
ಸಾಧಕರಿಗೆ ಸನ್ಮಾನ:  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎನ್.ಮಹೇಶ್, ಎಸ್.ಬಾಲರಾಜು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನಾರಾಯಣ ಪ್ರಸಾದ್,
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ  ಸಿ.ಜಿ.ಗಂಗಾಧರಯ್ಯ, ಖಜಾಂಚಿ ಕೆ.ವಿ.ಶ್ರೀಧರ್, ಉದ್ಯಮಿ ಸಿ.ರಾಜುಗೌಡ, ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಕನ್ನಡ ಮಹಾಸಭಾ ಗೌರವಾಧ್ಯಕ್ಷ ಶಾ.ಮುರಳಿ, ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜ್ ಗೋಪಾಲ್, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು,
ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ, ಉಪಾಧ್ಯಕ್ಷ ಚಿನ್ನುಮುತ್ತು,

ಆಲತ್ತೂರು ಜಯರಾಮು,  ಉದ್ಯಮಿ ಶ್ರೀನಿಧಿಕುದರ್, ನಿಜಧ್ವನಿಗೋವಿಂದರಾಜು, ಮಹೇಶ್ ಗೌಡ, ಹೊಮ್ಮ ಲೋಕೇಶ್, ಅರುಣಕುಮಾರ್ ಗೌಡ, ಮಹೇಶ್, ಮಂಗಲದ ಹೊಸೂರು ಶಿವಣ್ಣ  ಇತರರು ಹಾಜರಿದ್ದರು.

ಚಾಮರಾಜನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ನಡೆದ ಬೆಂಗಳೂರು ನಗರ ನಿರ್ಮಾತೃ  ನಾಡುಪ್ರಭು ಶ್ರೀ ಕೆಂಪೇಗೌಡರವರ ಜಯಂತೋತ್ಸವ ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿ, ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ  ಉದ್ಘಾಟಿಸಿದರು.

Leave a Reply

Your email address will not be published. Required fields are marked *