ಚಾಮರಾಜನಗರ: ರಾಜ್ಯದ ದಲಿತ ಸಮುದಾಯದ ಹಿರಿಯರು, ಪ್ರಭಾವಿ ನಾಯಕರು, ಸಚಿವ ಡಾ. ಕೆ.ಹೆಚ್. ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಒತ್ತಾಯಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆ.ಹೆಚ್.ಮುನಿಯಪ್ಪ ಅವರು ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.ಕೇಂದ್ರ ಸಚಿವರಾಗಿ ಹಾಗೂ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ದೀರ್ಘಕಾಲದ ಆಡಳಿತ ಅನುಭವ ಹೊಂದಿರುವ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಜನಪರ ನಾಯಕರಾಗಿದ್ದಾರೆ.ಸುಮಾರು ಐದು ದಶಕಗಳಿಂದ ಪಕ್ಷ ಸಂಘಟನೆ, ದಲಿತ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟ ನಡೆಸಿರುವ ಡಾ. ಕೆ.ಹೆಚ್. ಮುನಿಯಪ್ಪನವರು ರಾಜ್ಯದ ಮಾದಿಗ ಸಮುದಾಯದ ಅತ್ಯಂತ ಹಿರಿಯ ರಾಜಕೀಯ ಧ್ವನಿಯಾಗಿದ್ದಾರೆ. ಎಂದರು.
ರಾಜ್ಯದ ಅತಿ ದೊಡ್ಡ ದಲಿತ ಸಮುದಾಯವಾದ ಮಾದಿಗ ಸಮುದಾಯಕ್ಕೆ ಇದುವರೆಗೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ದೊರಕಿಲ್ಲ. ಆದ್ದರಿಂದ ಸಾಮಾಜಿಕ ನ್ಯಾಯದ ಆಶಯವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ. ಕೆ.ಹೆಚ್. ಮುನಿಯಪ್ಪನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಈ ಕಾಲದ ಅಗತ್ಯವಾಗಿದೆ.
ಇದರಿಂದ ಕಾಂಗ್ರೆಸ್ ಪಕ್ಷದ ಮೇಲೆ ದಲಿತರು, ಹಿಂದುಳಿದವರು ಹಾಗೂ ಶೋಷಿತ ವರ್ಗಗಳ ವಿಶ್ವಾಸ ಮತ್ತಷ್ಟು ಗಟ್ಟಿಯಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಪಕ್ಷದ ಬಲವೂ ಹೆಚ್ಚಲಿದೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ಸಮುದಾಯದ ಭಾವನೆಗಳಿಗೆ ಸ್ಪಂದಿಸಿ, ಡಾ. ಕೆ.ಹೆಚ್. ಮುನಿಯಪ್ಪನವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು
ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಒತ್ತಾಯಿಸಿದರು..ಸಭೆಯಲ್ಲಿ ಮಾದರ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಳ್ಯ ರಾಜಪ್ಪ, ಉಪಾಧ್ಯಕ್ಷ ನಿಟ್ರೆ ಮಹದೇವಯ್ಯ, ಕೊಳ್ಳೇಗಾಲ ತಾಲ್ಲೂಕು ಆಧ್ಯಕ್ಷ ಸಿ.ಸೋಮು, ಹನೂರು ತಾಲೂಕು ಅಧ್ಯಕ್ಷ ಟಿ .ಸುದೇಶ್, ಚಾಮರಾಜನಗರ ತಾಲೂಕು ಅಧ್ಯಕ್ಷ ಎಂ.ರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಅಂಕಹಳ್ಳಿ ಸಿದ್ದಯ್ಯ, ಕೊಳ್ಳೇಗಾಲ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟ ಅಧ್ಯಕ್ಷ ಬಿ.ಬಾಲರಾಜು, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಹರವೆ ನಾಗೇಶ್, ಕೊಳ್ಳೇಗಾಲ ಮಾದರ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ಆರ್.ಸೋಮೇಶ್ ಹಾಜರಿದ್ದರು.