ಚಾಮರಾಜನಗರ : ದಲಿತ ಸಮುದಾಯದ ಹಿರಿಯ ನಾಯಕರಾದ ಸಚಿವ, ಕೆ, ಹೆಚ್.ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು,
ಸಮುದಾಯದಲ್ಲೊಬ್ಬರಿಗೆ ತೆರವು ಆಗಿರುವ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ನೀಡಬೇಕು ಎಂದು ಡಾ. ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಡಾ. ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಬಸವನಪುರ ರಾಜಶೇಖರ್ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯುಳ್ಳ ಮಾದಿಗ ಸಮುದಾಯ ರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದೇವೆ. ದಲಿತ ರಾಜಕಾರಣಿ, ನಾಯಕರಾದ ಕೆ.ಎಚ್.ಮುನಿಯಪ್ಪ ಅವರು 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರಸ್ತುತ ರಾಜ್ಯಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಸಾಕಷ್ಟು ಅನುಭವ ಹೊಂದಿರುವ ಅವರನ್ನು ಕಾಂಗ್ರೆಸ್ ವರಿಷ್ಠರು ಉಪಮುಖ್ಯಮಂತ್ರಿಯಾಗಿ ಮಾಡಬೇಕು. ತೆರವು ಆಗಿರುವ ವಿಧಾನ ಪರಿಷತ್ ಸ್ಥಾನವನ್ನು ಸಮುದಾಯದಲ್ಲೊಬ್ಬರಿಗೆ ನೀಡುವ ಮೂಲಕ ಸಮುದಾಯ ಅಭಿವೃದ್ಧಿಗೆ ಒತ್ತು ನೀಡಿದರೆ ಸರ್ಕಾರಕ್ಕೂ, ಪಕ್ಕಕ್ಕೂ ಗೌರವ ಬರುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಹೆಚ್.ಹೆಚ್.ನಾಗರಾಜು ಮಾತನಾಡಿ, ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಧ್ರುವತಾರೆ, ಸಚಿವರಾದ ಕೆ.ಎಚ್.ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು. ಅಲ್ಲದೆ ಸಮುದಾಯದಲ್ಲೊಬ್ಬರಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ನಮ್ಮ ಸಂಘಟನೆಯಿಂದ ಹೋರಾಟ ಆರಂಭಿಸಲಾಗಿದ್ದು, ನಾಳೆಯಿಂದ ರಾಜ್ಯದ ಎಲ್ಲಕಡೆಯೂ ಸಮುದಾಯ ಮುಖಂಡರು ಕೆ.ಹೆಚ್. ಮುನಿಯಪ್ಪ ಅವರಿಗೆ.. ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಮಾಡುವ ಮೂಲಕ ನಮ್ಮ ಹೋರಾಟ ಸರ್ಕಾರಕ್ಕೆ ಮುಟ್ಟುವಂತೆ ಮಾಡಬೇಕು ಎಂದರು.
ಸಭೆಯಲ್ಲಿ ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಗೌರವ ಸಲಹೆಗಾರ ಅರಕಲವಾಡಿ ಜವರಯ್ಯ, ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಎಂ.ಶಿವಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷರಾದ ಬ್ಯಾಂಕ್ ಬಸವರಾಜು, ಸಿ.ಚನ್ನಬಸವಯ್ಯ, ಹಸಗೂಲಿ ಸಿದ್ದಯ್ಯ, ಖಜಾಂಚಿ ದ್ವಾರ್ಕಿ ಬಸವರಾಜು, ಕೊಳ್ಳೇಗಾಲ ಅಧ್ಯಕ್ಷ ಗೋಪಿ, ಗೌರವಾಧ್ಯಕ್ಷ ಶಿವಮಲ್ಲು, ಕೆಸ್ತೂರುಮರಪ್ಪ, ಹಂಗಳ ಸಿದ್ದೇಶ್, ಸಿ.ಮಾಧು, ವಸಂತ್ರ,ಸೋಮಣ್ಣ, ಮುತ್ತುರಾಜು, ಲಿಂಗರಾಜು, ರಾಮಣ್ಣ, ದೇವರಾಜು ಇತರರು ಭಾಗವಹಿಸಿದ್ದರು.