ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ-2026ರ ಅಂಗವಾಗಿ ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಹಾಗೂ ಸ್ಕೇಟಿಂಗ್ ಓಟಕ್ಕೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಸಿರು ನಿಶಾನೆ ತೋರಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮ್ಯಾರಥಾನ್ ಹಾಗೂ ಸ್ಕೇಟಿಂಗ್ ಓಟದಲ್ಲಿ ಮಕ್ಕಳು ಹಾಗೂ ಚಿಣ್ಣರ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಶ್ರೀರೂಪ, ಇತರರು ಗಣ್ಯರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು.
ಇದೇ ವೇಳೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಮೈಸೂರು ದಸರಾ ಉತ್ಸವದಂತೆ ಚಾಮರಾಜನಗರದಲ್ಲಿಯೂ ದಸರಾ ಆಯೋಜಿಸಲಾಗಿದೆ. ಕಳೆದ ಮೂರು ದಿನಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜಿಲ್ಲಾಕೇಂದ್ರದಲ್ಲಿ ಅತೀ ಕಡಿಮೆ ಸಮಯದಲ್ಲಿ ದಸರಾ ಏರ್ಪಾಡಾದರೂ ಯಶಸ್ವಿಯಾಗಿದೆ. ಉತ್ತಮ ಮಳೆಯಾಗಿ ಜಿಲ್ಲೆ ಸಮೃದ್ಧಿಯಾಗಲಿ ಎಂದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಮ್ಯಾರಥಾನ್ ಹಾಗೂ ಸ್ಕೇಟಿಂಗ್ ಓಟದಲ್ಲಿ ಭಾಗವಹಿಸಲು ಪುಟ್ಟಮಕ್ಕಳು ಸಹ ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಚಾಂಪಿಯನ್ಗಳಾಗಿ ಹೊರಹೊಮ್ಮಲಿದ್ದಾರೆ. ಜಿಲ್ಲೆಯಲ್ಲಿ 200 ಮಕ್ಕಳು ಸ್ಕೇಟಿಂಗ್ ಕಲಿಯುತ್ತಿದ್ದು, ಈ ಪೈಕಿ 24 ಮಂದಿ ಮಕ್ಕಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜಿಲ್ಲಾಕೇಂದ್ರದಲ್ಲಿ ಸ್ಕೇಟಿಂಗ್ ಅಭ್ಯಾಸ ಮಾಡಲು ಟ್ರ್ಯಾಕ್ ಕೊರತೆ ಇದೆ. ಮಕ್ಕಳ ಸ್ಕೇಟಿಂಗ್ ಕಲಿಕೆಗೆ ಅನುಕೂಲವಾಗುವಂತೆ ಟ್ರ್ಯಾಕ್ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಶಾಲಾ, ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್, ದೈಹಿಕ ಶಿಕ್ಷಣ ತಾಲೂಕು ಅಧ್ಯಕ್ಷರಾದ ಶಿವಬಸವಯ್ಯ, ಶಿವಮಲ್ಲು, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೇತರಾದ ತಲಾ 7 ಮಂದಿ ಸ್ಪರ್ಧಿಗಳಿಗೆ ಸ್ಮರಣಿಕೆ, ಬಹುಮಾನ ವಿತರಿಸಲಾಯಿತು. ಪುರುಷರ ವಿಭಾಗದಲ್ಲಿ ಹೊಂಗನೂರಿನ ಮನೋಹರ್, ಮಹೇಶ್, ಬ್ಯಾಡಮೂಡ್ಲು ಗ್ರಾಮದ ಯೋಗೇಶ್, ಬೂದಿತಿಟ್ಟು ಗ್ರಾಮದ ಜೀವನ್, ಗುರು, ರಂಗಸ್ವಾಮಿ ಇತೇಶ್ ಮತ್ತು ಮಹಿಳೆಯರ ವಿಭಾಗದಲ್ಲಿ ನದಿಯಾ, ಚಂದ್ರಮ್ಮ, ಪ್ರೀತಿ, ನಳಿನಿ, ಅನುಷಾ, ಹೇಮ, ಶಾವಣಿ ವಿಜೇತರಾದ ಮಕ್ಕಳಾಗಿದ್ದಾರೆ.
ಮ್ಯಾರಥಾನ್ ಇವನ ಚಾಮರಾಜೇಶ್ವರ ದೇವಸ್ಥಾನದಿಂದ ಬಿ. ರಾಚಯ್ಯ ರಸ್ತೆ ಮೂಲಕ ರಾಮಸಮದ್ರದ ಅಂಬೇಡ್ಕರ್ ಪ್ರತಿಮೆಯಿಂದ ಹಿಂತಿರುಗಿ ನ್ಯಾಯಾಲಯದ ರಸ್ತೆ ಮೂಲಕ ಸಾಗಿ ಅಂಬೇಡ್ಕರ್ ಭವನದ ಮಾರ್ಗವಾಗಿ ಪ್ರವಾಸಿಮಂದಿರದವರೆಗೆ ಅಂತ್ಯಗೊಂಡಿತು. ಸ್ಕೇಟಿಂಗ್ ಓಟವು ಚಾಮರಾಜೇಶ್ವರ ದೇವಸ್ಥಾನದಿಂದ ಬಿ. ರಾಚಯ್ಯ ರಸ್ತೆ ಮೂಲಕ ಡಿ.ವೈ.ಎಸ್.ಪಿ ಕಚೇರಿಯಿಂದ ಹಿಂತಿರುಗಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಕ್ತಾಯವಾಯಿತು.