ಮಾಹಿತಿ ಹಕ್ಕು (RTI) ಅರ್ಜಿಗಳ ಆನ್‌ಲೈನ್ ನೋಂದಣಿ ಈಗ ‘ಸಕಾಲ’ ಸೇವೆಗೆ ಸೇರ್ಪಡೆ: 2 ದಿನಗಳಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ

​ಬೆಂಗಳೂರು : ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸುಲಭ ಮತ್ತು ವೇಗದ ಸೇವೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರಿಂದ ಭೌತಿಕವಾಗಿ (ಅಂಚೆ ಅಥವಾ ಖುದ್ದಾಗಿ) ಸ್ವೀಕರಿಸುವ ಆರ್‌ಟಿಐ ಅರ್ಜಿಗಳನ್ನು ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸುವ ಸೇವೆಯನ್ನು ಈಗ ‘ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ’ದ ವ್ಯಾಪ್ತಿಗೆ ತರಲಾಗಿದೆ.

​ಕಾಲಮಿತಿ ನಿಯಮ (02 ದಿನಗಳು): ಯಾವುದೇ ಸರ್ಕಾರಿ ಕಚೇರಿಯಲ್ಲಿ ಭೌತಿಕವಾಗಿ ಸ್ವೀಕರಿಸಿದ ಆರ್‌ಟಿಐ ಅರ್ಜಿಯನ್ನು ಸಂಬಂಧಪಟ್ಟ ಕಚೇರಿಯ ಮುಖ್ಯಸ್ಥರು ಅಥವಾ ಅವರು ನೇಮಿಸಿದ ಅಧಿಕಾರಿ/ಸಿಬ್ಬಂದಿಯು 2 ಕೆಲಸದ ದಿನಗಳ ಒಳಗಾಗಿ ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ (RTI Online Portal) ನಮೂದಿಸುವುದು (Entry) ಕಡ್ಡಾಯವಾಗಿದೆ.

​ಮೇಲ್ಮನವಿಗೆ ಕಾಲಮಿತಿ: ​ಮೊದಲನೇ ಮೇಲ್ಮನವಿ: ಸಕ್ಷಮ ಪ್ರಾಧಿಕಾರವು (ಮಾಹಿತಿ ಹಕ್ಕು ಕಾಯ್ದೆಯಡಿಯ ಮೊದಲನೇ ಮೇಲ್ಮನವಿ ಪ್ರಾಧಿಕಾರ) 7 ಕೆಲಸದ ದಿನಗಳಲ್ಲಿ ಇತ್ಯರ್ಥಪಡಿಸಬೇಕು.

​ಎರಡನೇ ಮೇಲ್ಮನವಿ: ಮೇಲ್ಮನವಿ ಪ್ರಾಧಿಕಾರವು (ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳು) 7 ಕೆಲಸದ ದಿನಗಳಲ್ಲಿ ಅರ್ಜಿ ಇತ್ಯರ್ಥಗೊಳಿಸಬೇಕು.

​ನೋಡಲ್ ಅಧಿಕಾರಿಗಳ ಜವಾಬ್ದಾರಿ: ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯು (PIO) ಇನ್ನು ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಿರದಿದ್ದರೆ, ಅರ್ಜಿಯನ್ನು ಜಿಲ್ಲಾ ಅಥವಾ ಇಲಾಖಾ ಮಟ್ಟದ ‘ನೋಡಲ್ ಅಧಿಕಾರಿ’ಗೆ ರವಾನಿಸಲಾಗುತ್ತದೆ. ಆ PIO ಅವರನ್ನು ಯಾವುದೇ ವಿಳಂಬವಿಲ್ಲದೆ ಪೋರ್ಟಲ್‌ಗೆ ನೋಂದಾಯಿಸುವ ಜವಾಬ್ದಾರಿ ನೋಡಲ್ ಅಧಿಕಾರಿಯದ್ದಾಗಿರುತ್ತದೆ.

ಈ ಆದೇಶವು ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು ಹಾಗೂ ಸಂಸ್ಥೆಗಳಿಗೆ ತಕ್ಷಣದಿಂದಲೇ ಅನ್ವಯವಾಗಲಿದೆ.

ಈ ಮುಂಚೆ ಭೌತಿಕವಾಗಿ ನೀಡಿದ ಆರ್‌ಟಿಐ ಅರ್ಜಿಗಳ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಈಗ ಇದನ್ನು ಸಕಾಲ ಕಾಯ್ದೆಯಡಿ ಸೇರಿಸಿರುವುದರಿಂದ, ಅಧಿಕಾರಿಗಳು ನಿಗದಿತ 2 ದಿನಗಳಲ್ಲಿ ಆನ್‌ಲೈನ್‌ಗೆ ಸೇರಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕರಿಗೆ ತಮ್ಮ ಅರ್ಜಿಗಳ ಸ್ಥಿತಿಗತಿಯನ್ನು ಆನ್‌ಲೈನ್ ಮೂಲಕ ಸುಲಭವಾಗಿ ವೀಕ್ಷಿಸಲು ಹಾಗೂ ಶೀಘ್ರ ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದು ​ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *