ಮಕ್ಕಳ ಆಧಾರ್ ಬಯೋಮೆಟ್ರಿಕ್ ನೋಂದಣಿಗೆ ಶಿಬಿರ ಅಯೋಜಿಸಿ : ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಜಿಲ್ಲೆಯಲ್ಲಿರುವ 5 ವರ್ಷದ ಹಾಗೂ 15 ವರ್ಷದ ನಂತರದ ಮಕ್ಕಳು ಕಡ್ಡಾಯವಾಗಿ ಆಧಾರ್ ಕಾರ್ಡ್‍ಗೆ ಬಯೋಮೆಟ್ರಿಕ್ ನೋಂದಣಿ ಮಾಡಿಸಬೇಕಿದ್ದು, ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಆಂದೋಲನ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು. 

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಮೇ.26) ನಡೆದ ಜಿಲ್ಲಾಮಟ್ಟದ ಆಧಾರ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಪ್ರವೇಶ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಯೋಜನೆ, ವಿದ್ಯಾರ್ಥಿವೇತನ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಇನ್ನೂ ಹಲವು ಉದ್ದೇಶಗಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿದೆ. 5 ಹಾಗೂ 15ನೇ ವರ್ಷದ ಮಕ್ಕಳ ಆಧಾರ್ ಗೆ ಬಯೋಮೆಟ್ರಿಕ್ ಅಪ್ ಡೇಟ್ ಕಡ್ಡಾಯವಾಗಿದೆ. ಹೀಗಾಗಿ ಶಾಲೆಗಳಲ್ಲಿಯೇ ಈ ಸೌಲಭ್ಯಕ್ಕಾಗಿ ಶಿಬಿರಗಳನ್ನು ಏರ್ಪಾಡು ಮಾಡುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು. 

  ಮಕ್ಕಳ ಆಧಾರ್ ಅಪ್ ಡೇಟ್ ಪ್ರಕ್ರಿಯೆಯನ್ನು ವಿಶೇಷ ಮಾದರಿಯಲ್ಲಿ ಕೈಗೊಂಡು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಶಾಲೆಗಳಲ್ಲಿ ಆಧಾರ್ ಅಪ್ ಡೇಟ್ ಶಿಬಿರಗಳಿಗೆ ದಿನಾಂಕಗಳನ್ನು ನಿಗದಿ ಮಾಡಿ ವ್ಯಾಪಕವಾಗಿ ತಿಳಿವಳಿಕೆ ನೀಡಬೇಕು ಎಂದರು. 

  ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡದೆ ಇರುವವರ ಬಗ್ಗೆ ವಿವರ ಪಡೆದ ಜಿಲ್ಲಾಧಿಕಾರಿಗಳು ಈ ಕುರಿತು ತ್ವರಿತ ಗತಿಯಲ್ಲಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. 

  ಎಂ ಆಧಾರ್ ಆಪ್ ನಲ್ಲಿ ಮೊಬೈಲ್ ಮೂಲಕ ಆಧಾರ್ ತಿದ್ದುಪಡಿಗೆ ಅವಕಾಶವಿದ್ದು, ವಿಳಾಸ ತಿದ್ದುಪಡಿಯನ್ನು ಸ್ವತಹ ಮಾಡಿಕೊಳ್ಳಬಹುದು. 10 ವರ್ಷಗಳ ಹಳೆಯ ಆಧಾರ್ ಕಾರ್ಡ್‍ಗಳನ್ನು ಸ್ವತಹ ಲಿಂಕ್ hಣಣಠಿs://mಥಿಚಿಚಿಜhಚಿಚಿಡಿ.uiಜಚಿi.gov.iಟಿ/ಜu/eಟಿ_Iಓ  ಮೂಲಕ ನವೀಕರಿಸಿಕೊಳ್ಳಬಹುದು ಎಂದರು.

  ಐಪಿಪಿಬಿ ಯ (ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್) ಹತ್ತಿರದ ಅಂಚೆ ಕಚೇರಿಗಳಲ್ಲಿ ಬಾಲ ಆಧಾರ್, 5 ವರ್ಷದ ಮಕ್ಕಳ ನೊಂದಣಿ ಮತ್ತು ಮೊಬೈಲ್ ತಿದ್ದುಪಡಿಗೆ ಅವಕಾಶವಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸಹ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

  ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಜಿಲ್ಲಾ ಆಧಾರ್ ಸಮಾಲೋಚಕರಾದ ರಂಗಸ್ವಾಮಿ, ಇ-ಆಡಳಿತ ಜಿಲ್ಲಾ ಸಮಾಲೋಚಕರಾದ ಮಧುಕೇಶ್ ಸಭೆಯಲ್ಲಿ ಉಪಸ್ಥಿತರಿದ್ದರು. 

   ಬೆಂಗಳೂರಿನಿಂದ ಆನ್ ಲೈನ್ ಮೂಲಕ ಯುಐಡಿಎಐ ನ ಸಹಾಯಕ ವ್ಯವಸ್ಥಾಪಕರಾದ ಮೊಹಮ್ಮದ್ ಮುಸಾಬ್, ಇ-ಆಡಳಿತದ ರಾಜ್ಯ ಸಮಾಲೋಚಕರಾದ ಪ್ರಭುಸ್ವಾಮಿ ಪಾಲ್ಗೊಂಡರು.

Leave a Reply

Your email address will not be published. Required fields are marked *