ಪಂಚಾಯಿತಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿದ್ದು ಪಂಚಾಯತ್ ರಾಜ್ ಕಾಯ್ದೆ : ಜಿ.ಪಂ ಸಿ.ಇ.ಒ ಮೋನಾರೋತ್

ಚಾಮರಾಜನಗರ: ವಿಕೇಂದ್ರಿಕೃತ ಆಡಳಿತದಲ್ಲಿ ಮಹತ್ವದ ಮೈಲುಗಲ್ಲಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನದ 73ನೇ ತಿದ್ದುಪಡಿ ಮೂಲಕ ಜಾರಿಗೊಳಿಸಿ ಸ್ಥಳೀಯ ಆಡಳಿತವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ 1993ರ ಪಂಚಾಯತ್ ರಾಜ್ ಕಾಯ್ದೆಯು ಪಂಚಾಯಿತಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾರೋತ್ ಅವರು ತಿಳಿಸಿದರು.

   ಪಂಚಾಯತ್ ರಾಜ್ ಸಂಸ್ಥೆಗಳು ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಸಾಮಥ್ರ್ಯವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಪಂಚಾಯತ್ ರಾಜ್ ಸಂಸ್ಥೆಗಳು ದೇಶದ ಪ್ರಗತಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ತೆರಿಗೆ ವಸೂಲಾತಿ, ಗ್ರಾಮೀಣ ನೈರ್ಮಲ್ಯ, ಮಹಿಳಾ ಸ್ವಾವಲಂಬನೆ, ಕೃಷಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಉದ್ಯೋಗ ಸೇರಿದಂತೆ ಹಲವು ಆಯಾಮಗಳಲ್ಲಿ ಪಂಚಾಯತಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.

   ಗ್ರಾಮಗಳ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಪಂಚಾಯತಿಗಳ ಮಹತ್ವ ಹೆಚ್ಚಾಗಿರುವುದರಿಂದ ಉತ್ತಮ ಕಾರ್ಯನಿರ್ವಹಿಸಿದ ಗ್ರಾಮಪಂಚಾಯತಿಗಳನ್ನು ಅಭಿನಂದಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾರೋತ್ ಅವರು ಇದೇ ವೇಳೆ ತಿಳಿಸಿದರು.  

  ತೆರಿಗೆ ವಸೂಲಾತಿಯಲ್ಲಿ ಯಳಂದೂರು ತಾಲ್ಲೂಕು ಶೇ. 91ರಷ್ಟು ಪ್ರಗತಿ ಸಾಧಿಸಿದ್ದು, ಚಾಮರಾಜನಗರ ತಾಲ್ಲೂಕಿನ ಸಾಗಡೆ, ಗುಂಡ್ಲುಪೇಟೆ ತಾಲ್ಲೂಕಿನ ನಿಟ್ರೆ, ಹನೂರು ತಾಲ್ಲೂಕಿನ ಗೋಪಿನಾಥಂ, ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ, ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮಪಂಚಾಯತಿ ಅಧಿಕಾರಿ, ಸಿಬ್ಬಂದಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

   ಗ್ರಾಮಪಂಚಾಯತಿಗಳ ಅರಿವು ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ ಜ್ಯೋತಿಗೌಡನಪುರ, ಹಂಗಳ, ಸೂಳೇರಿಪಾಳ್ಯ. ದೊಡ್ಡಿಂದುವಾಡಿ, ಕೆಸ್ತೂರು ಹಾಗೂ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿಯಾಗಿ ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಗ್ರಾಮಪಂಚಾಯತಿ ಮತ್ತು ‘ಸಂತಸಮಯ ವೃದ್ದಾಪ್ಯ’ ಕಾರ್ಯಕ್ರಮದಡಿ ಹಿರಿಯ ನಾಗರೀಕರ ಸ್ವಾಸ್ಥ್ಯ, ಕಲ್ಯಾಣ ಕುರಿತ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್ ಸಂಸ್ಥೆಯನ್ನು ಅಭಿನಂದಿಸಲಾಯಿತು.

   ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಮುಖ್ಯ ಯೋಜನಾಧಿಕಾರಿ, ಹೊನ್ನರಾಜು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮಪಂಚಾಯತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *