- ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ
ಚಾಮರಾಜನಗರ: ಜಿಲ್ಲಾವ್ಯಾಪ್ತಿಯ ಎಲ್ಲಾ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳ ಪೌರಕಾರ್ಮಿಕರಿಗೆ ಆರೋಗ್ಯ ಸುರಕ್ಷಾ ಪರಿಕರಗಳೊಂದಿಗೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಸೂಚಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ ಬಳಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಆರಂಭದಲ್ಲಿ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರೊಂದಿಗೆ ನೇರ ಸಂವಾದ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು.
ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಜನರ ಆರೋಗ್ಯ ಕಾಳಜಿಯನ್ನು ಹೊಂದಿರುವ ಆರೋಗ್ಯ ಕೇಂದ್ರಗಳು ಅಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಹಿತ ಕಾಯಲು ಆದ್ಯತೆಮೇರೆಗೆ ಮುಂದಾಗಬೇಕಿದೆ. ಹೊರಗುತ್ತಿಗೆ ಹಾಗೂ ನೇರಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನ ಚೀಟಿ ನೀಡಬೇಕು. 2018ರಿಂದ ಇ.ಎಸ್.ಐ ಕಾರ್ಡ್, ಪಿ.ಎಫ್ ಕಟಾವಣೆಯಾಗಿರುವ ಬಗ್ಗೆ ಪ್ರತಿ ಹಾಗು ಕನಿಷ್ಠ ವೇತನ ಪ್ರಮಾಣ ಪತ್ರ, ವಿಮಾ ಸೌಲಭ್ಯ ನೀಡಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಉತ್ತಮ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಮಾಸ್ಟರ್ ಚೆಕ್‍ಅಪ್ ಮಾಡಿಸುವುದು ಕಡ್ಡಾಯವಾಗಿದೆ. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ 80 ಶೌಚಾಲಯಗಳಿದ್ದು, ಕೇವಲ 8 ಮಂದಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಸ್ಪತ್ರೆಯ ಅಗತ್ಯಕ್ಕನುಗುಣವಾಗಿ ಹೆಚ್ಚುವರಿಯಾಗಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೌರಕಾರ್ಮಿಕರಿಗೆ ವೇತನ ನೀಡಿಕೆಯಲ್ಲಿ ಅಧಿಕಾರಿಗಳು ವಿಳಂಬಕ್ಕೆ ಸಬೂಬು ಹೇಳಬಾರದು. ಪ್ರತಿತಿಂಗಳು 5ನೇ ತಾರೀಖಿನೊಳಗೆ ನಿಗದಿತ ಕನಿಷ್ಠ ವೇತನ ನೀಡಬೇಕು. 2-3 ತಿಂಗಳು ವೇತನ ವಿಳಂಬವಾದರೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ವೇತನ ಪಾವತಿಯಾಗಿಲ್ಲವೋ ಅಲ್ಲಿ 1 ವಾರದೊಳಗೆ ವೇತನ ಪಾವತಿಸಬೇಕು. ತಪ್ಪಿದಲ್ಲಿ ಕ್ರಮ ವಹಿಸಲು ಆಯೋಗಕ್ಕೆ ಪತ್ರ ಬರೆಯಲಾಗುವುದು. ಎಲ್ಲಾ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹಗಳಿರಬೇಕು. ಹಬ್ಬದ ದಿನಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಹೆಚ್ಚುವರಿ ವೇತನ ಪಾವತಿಸಬೇಕು ಎಂದು ಸೂಚಿಸಿದರು.
ಪೌರಕಾರ್ಮಿಕರಿಗೆ ಐ.ಎಸ್.ಐ ಮುದ್ರಿತ ಸುರಕ್ಷಾ ಪರಿಕರಗಳನ್ನೇ ವಿತರಿಸಬೇಕು. ಫಿಟ್ ಗುಂಡಿಗಳನ್ನು ತೆರವುಗೊಳಿಸಲು ಪೌರಕಾರ್ಮಿಕರನ್ನು ಬಳಸದೇ ಕಡ್ಡಾಯವಾಗಿ ಸಕ್ಕಿಂಗ್ ಯಂತ್ರಗಳ ಮೂಲಕ ತೆರವುಗೊಳಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಆಗಾಗ್ಗೆ ಅಸ್ಪತ್ರೆ, ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಆಯೋಗದ ಸದಸ್ಯರಾದ ಶಂಕರ ಅಂಕನಶೆಟ್ಟಿಪುರ ಅವರು ತಿಳಿಸಿದರು.
ಇದೇ ವೇಳೆ ಚಾಮರಾಜನಗರ ಇ.ಎಸ್.ಐ ಶಾಖೆಯ ವ್ಯವಸ್ಥಾಪಕರಾದ ಸುನೀಲ್ ಹಾಗೂ ಸಫಾಯಿ ಕರ್ಮಚಾರಿ ನಿಗಮದ ಸಿಬ್ಬಂದಿ ಹರೀಶ್ ಅವರು ವಿವಿಧ ಯೋಜನೆಗಳ ಕುರಿತು ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರೇಣುಕಾದೇವಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಗೀತಾಂಜಲಿ, ಡಾ. ಸುಂದರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.