ಪ್ರಜಾಸೇವಾ ಅಂದೋಲನ : ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಜಿಲ್ಲೆಯಾದ್ಯಂತ ತಾಲೂಕು ಹಾಗೂ ಹೋಬಳಿಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಜಾಸೇವಾ ಆಂದೋಲನ ಅಹವಾಲು ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ತಾಲೂಕು ಹಾಗೂ ಹೋಬಳಿಮಟ್ಟದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಅಗತ್ಯವಿದೆ. ಸ್ವೀಕೃತವಾಗಿರುವ ಅರ್ಜಿಗಳನ್ನು ಈಗಾಗಲೇ ಪ್ರಜಾಸೇವಾ ಆಂದೋಲನ ಪೋರ್ಟಲ್‍ನಲ್ಲಿ ನೊಂದಣಿ ಮಾಡಲಾಗಿದ್ದು, ಸಾಕಷ್ಟು ಇಲಾಖೆಗಳಿಗೆ ಸಂಬಂಧಪಟ್ಟ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಗಳು ಎಷ್ಟು ಸಾಧ್ಯವೋ ಅಷ್ಟೂ ಅರ್ಜಿಗಳನ್ನು ತಮ್ಮ ಹಂತದಲ್ಲಿಯೇ ವಿಲೇವಾರಿ ಮಾಡಲು ಮುಂದಾಗಬೇಕು. ಅಗತ್ಯವಿದ್ದರೆ ಸೂಕ್ತ ಕಾರಣಗಳನ್ನು ನೀಡಿ ಮುಂದಿನ ಹಂತಕ್ಕೆ ಕಳುಹಿಸಬೇಕು. ಸಕಾರಣವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಯಾಮಾನುಸಾರ ಪರಿಶೀಲಿಸಲಾಗುವುದೆಂದು ಹಿಂಬರಹ ನೀಡಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಪ್ರಜಾಸೇವಾ ಆಂದೋಲನ ಕುರಿತು ಸಾರ್ವಜನಿಕರಲ್ಲಿ ನಿರಾಸಕ್ತಿ ಮೂಡದಂತೆ ತಡೆಯಲು ಅರ್ಜಿಗಳ ಇತ್ಯರ್ಥದ ವಿಳಂಬವನ್ನು ತಡೆಯಬೇಕು ಎಂದರು.

ಒಂದು ಅಥವಾ ಎರಡು ಅರ್ಜಿಗಳು ಬಾಕಿ ಇರುವ ಕೆಲ ಇಲಾಖೆಗಳು ಇಂದು ಸಂಜೆಯೊಳಗೆ ವಿಲೇವಾರಿ ಮಾಡಬೇಕು. ಹೆಚ್ಚಿನ ಅರ್ಜಿಗಳು ಬಾಕಿ ಇರುವ ಇಲಾಖೆಗಳು ಮುಂದಿನ 2-3 ದಿನಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಅರ್ಜಿಗಳನ್ನು ಶೀಘ್ರವಾಗಿ ಪರಿಹರಿಸಿ ಅರ್ಜಿಗಳಲ್ಲಿರುವ ಸಾರ್ವಜನಿಕರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅರ್ಜಿ ವಿಲೇವಾರಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು. ಅರ್ಜಿಗಳ ತ್ವರಿತ ಪರಿಹಾರಕ್ಕಾಗಿ ನೀಡುವ ಹಿಂಬರಹ ಕ್ರಮಬದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಗಮನಿಸುತ್ತಿದ್ದು, ತಾಲೂಕು, ಹೋಬಳಿಮಟ್ಟದ ಸಭೆಗಳಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ಅದಷ್ಟು ಬೇಗನೆ ಪರಿಹರಿಸಲು ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಲಾ ತಾಲೂಕು ತಹಶೀಲ್ದಾರರು, ನಗರ ಹಾಗೂ ಸ್ಥಳೀಯ ಸಂಸ್ಥೆಗಳು ಅರ್ಜಿಗಳ ವಿಲೇವಾರಿಗೆ ನಿಗಾ ವಹಿಸಬೇಕು. ಪ್ರಜಾಸೇವಾ ಆಂದೋಲನ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿರುವಂತೆ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಲು ಮುಂದಾಗುವಂತೆ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ಸೂಚಿಸಿದರು.

ಡಿ.ವೈ.ಎಸ್.ಪಿ ಸ್ನೇಹರಾಜ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ರಮಣ್ಯ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ನಗರಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಕೊಳ್ಳೇಗಾಲ ನಗರಸಭೆ ಪೌರಾಯುಕ್ತರಾದ ನಟರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‍ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು, ಆಹಾರ ಇಲಾಖೆ ಉಪನಿರ್ದೇಶಕರಾದ ವಸುಂಧರಾ ಹೆಗಡೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *