ಬಸವಮಾರ್ಗದಲ್ಲಿ ರಕ್ಷಾಬಂಧನ

ಮೈಸೂರು : ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದಿಂದ ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಗುರುವಾರ ರಕ್ಷಾಬಂಧನ ಆಚರಿಸಲಾಯಿತು.

ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ವಿಜಯನಗರ ಶಾಖೆಯ ಸಂಚಾಲಕರಾದ
ಸಂಧ್ಯಾ ಅವರು ಮಾತನಾಡಿ, ರಕ್ಷಾ ಬಂಧನವನ್ನು ಅತ್ಯಂತ ಆಳವಾದ ಆಧ್ಯಾತ್ಮಿಕ ರಹಸ್ಯ ಮತ್ತು ಮಹತ್ವದೊಂದಿಗೆ ಆಚರಿಸಲಾಗುತ್ತದೆ. ರಾಖಿ ಹಬ್ಬವು ಪರಮಾತ್ಮ ಮತ್ತು ಆತ್ಮಗಳ ನಡುವಿನ ಪವಿತ್ರ ಬಂಧನದ ಸಂಕೇತವಾಗಿದೆ.

ಹಣೆಯ ಮೇಲೆ ಇಡುವ ತಿಲಕವು ಕೇವಲ ಆಚರಣೆಯಲ್ಲ. ಇದು ನಾವು ದೇಹವಲ್ಲ, ಭ್ರೂಮಧ್ಯದಲ್ಲಿ ಹೊಳೆಯುತ್ತಿರುವ “ಜ್ಯೋತಿ ಸ್ವರೂಪ ಆತ್ಮ” ಎಂಬುದನ್ನು ನೆನಪಿಸುತ್ತದೆ. ದೇಹದ ಅಹಂಕಾರ ಮತ್ತು ವಿಕಾರಗಳನ್ನು ಗೆದ್ದು ಆತ್ಮ-ಅಭಿಮಾನಿಯಾಗುವುದರ ಸಂಕೇತವೇ ತಿಲಕವಾಗಿದೆ. ರಾಖಿ ಅಥವಾ ರಕ್ಷಾಸೂತ್ರ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಎಂಬ ಐದು ವಿಕಾರಗಳನ್ನು ತ್ಯಜಿಸುವ ಪವಿತ್ರತೆಯ ಪ್ರತಿಜ್ಞೆಯಾಗಿದೆ. ಮನಸ್ಸು, ಮಾತು ಮತ್ತು ಕರ್ಮಗಳಲ್ಲಿ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವುದಾಗಿ ಭಗವಂತನಿಗೆ ಕೊಡುವ ಭಾಷೆ ಇದಾಗಿದೆ ಎಂದರು.

ರಾಖಿ ಕಟ್ಟಿದ ನಂತರ ಸಿಹಿ ತಿನ್ನಿಸುವುದು ಎಂದರೆ ನಮ್ಮ ಸ್ವಭಾವ ಮತ್ತು ಮಾತುಗಳಲ್ಲಿ ಮಧುರತೆಯನ್ನು ತಂದುಕೊಳ್ಳುವುದು. ಎಲ್ಲರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ವರ್ತಿಸುವ ಸಂಕೇತವಾಗಿದೆ. ವಿಶ್ವ ಭ್ರಾತೃತ್ವವು ನಾವು ಜಾತಿ, ಮತ, ಭಾಷೆಗಳ ಎಲ್ಲೆ ಮೀರಿ ಒಂದೇ ಪರಮಾತ್ಮನ ಮಕ್ಕಳು ಎಂಬ ವಿಶ್ವ ಭ್ರಾತೃತ್ವದ ಭಾವನೆಯನ್ನು ಇದು ಮೂಡಿಸುತ್ತದೆ. ಈ ದೃಷ್ಟಿಕೋನದಿಂದ ಇಡೀ ಸಮಾಜವೇ ಒಂದು ಆಧ್ಯಾತ್ಮಿಕ ಕುಟುಂಬವಾಗುತ್ತದೆ ಎಂದು‌ ರಕ್ಷಾ ಬಂಧನದ ಮಹತ್ವ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಣ್ಣ, ಮಮತಾ, ಜಯಲಕ್ಷ್ಮಿ, ಜಗದೀಶ್ ಇದ್ದರು‌.

Leave a Reply

Your email address will not be published. Required fields are marked *