- ಚಾಮರಾಜನಗರ ರೋಟರಿ ಕ್ಲಬ್ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಪದಗ್ರಹಣ
- ನನ್ನ ಅವಧಿಯಲ್ಲಿ ಚಾಮರಾಜನಗರದಲ್ಲಿ ರೋಟರಿ ಕಣ್ಣಿನ ಆಸ್ಪತ್ರೆ ಮಾಡುವ ಗುರಿ : ಅಬ್ದುಲ್ ಅಜೀಜ್

ಚಾಮರಾಜನಗರ: ರೋಟರಿ ಕ್ಲಬ್‌ನ 2026-27ನೇ ಸಾಲಿನ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್, ಕಾರ್ಯದರ್ಶಿ ಜಿ.ಅಂಕಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆಯಿತು.
ಜಿಲ್ಲಾ ಗವರ್ನರ್ ಯಶಸ್ವಿ ಎಸ್. ಸೋಮಶೇಖರ್ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಅವರಿಗೆ ಪದವಿಪ್ರಧಾನ ಮಾಡಿದರು. ಪದಾಧಿಕಾರಿಗಳಾದ ನಿಕಟಪೂರ್ವ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಸಿದ್ದರಾಜು, ಜಂಟಿ ಕಾರ್ಯದರ್ಶಿ ಮಹದೇವಪ್ರಸಾದ್, ಖಜಾಂಚಿ ಆರ್.ಎಂ.ಸ್ವಾಮಿ, ದಂಡಾಯುಧಪಾಣಿ ಎಂ.ರಮೇಶ್, ನಿರ್ದೇಶಕ ರಾದ ಸಂಘ ಸೇವೆ ಜಿ.ಡಿ.ನೇಮಿರಾಜ್, ವೃತ್ತಿ ಸೇವೆ ಬಿ.ರತ್ನಮ್ಮ ಬಸವರಾಜು, ಸಮುದಾಯ ಸೇವೆ ಅರ್.ಎನ್.ರಾಮು, ಅಂತರಾಷ್ಟ್ರೀಯ ಸೇವೆ ರಾಜುವರ್ಗೀಸ್, ಯುವಜನಸೇವೆ ಮಹಾದೇವಸ್ವಾಮಿ ಪದವಿ ಸ್ವೀಕರಿಸಿದರು.
ರೋಟರಿ ಗೆ ಸೇರ್ಪಡೆ:
ಸಿ.ಎನ್.ಯಶೋಧರ್, ಚಂದ್ರ, ಕೆ.ಬಿ.ಮಹದೇವಮೂರ್ತಿ, ಮಹಾದೇವಸ್ವಾಮಿ, ಶ್ರೀನಿಧಿಕುದರ್, ಶಂಕರ್, ಜೆ.ಮೇರಿ ಅಲೀಸ್, ಬಿ.ಚಂದ್ರು ಅವರು ರೋಟರಿ ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡೆಯಾದರು.
ಸಮಾಜಸೇವೆಯೇ ರೋಟರಿ ಧ್ಯೇಯ: ಪದವಿ ಪ್ರಧಾನ ಮಾಡಿದ ಜಿಲ್ಲಾ ಗವರ್ನರ್ ಯಶಸ್ವಿ ಎಸ್. ಸೋಮಶೇಖರ್ ಮಾತನಾಡಿ, ಗುಣಮಟ್ಟದ ಶಿಕ್ಷಣ, ಪ್ರಕೃತಿ-ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಶುದ್ಧ ಕುಡಿಯುವ ನೀರು ಪೂರೈಕೆ, ಯುವಜನರಿಗೆ ನಾಯಕತ್ವ ತರಬೇತಿ, ಆರೋಗ್ಯ ರಕ್ಷಣೆ ಮೊದಲಾದ ಶಾಶ್ವತ ಪರಿಣಾಮಗಳ ಸೇವಾ ಕಾರ್ಯಗಳನ್ನು ರೋಟರಿ ಕ್ಲಬ್‌ಗಳು ಮಾಡಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು 120 ವರ್ಷಗಳ ಇತಿಹಾಸವಿದೆ.
200 ದೇಶಗಳಲ್ಲಿ 35,000 ಕ್ಲಬ್‌ಗಳ ಮೂಲಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಕಾಲಕ್ಕೆ ತಕ್ಕಂತೆ ಸೇವೆಯ ದೃಷ್ಟಿಕೋನ ಮತ್ತು ಕಾಳಜಿ ಬದಲಾಗಿದ್ದು ದೀನ-ದಲಿತರು, ನಿರ್ಗತಿಕರ ಮುಖದಲ್ಲಿ ಮಂದಹಾಸ ಮೂಡಿ ಸಮಾಜದಲ್ಲಿ ಶಾಶ್ವತ ಸುಖ-ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವುದೇ ರೋಟರಿ ಕ್ಲಬ್‌ಗಳ ಧ್ಯೇಯವಾಗಿದೆ ಎಂದು ಹೇಳಿದರು.
ಚಾಮರಾಜನಗರ ರೋಟರಿ ಸಂಸ್ಥೆಯ 2025-26 ನೇ ಸಾಲಿನ ಅಧ್ಯಕ್ಷರಾದ ಚಂದ್ರಶೇಖರ್ ಅವರು ಉತ್ತಮ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಡೈಮಂಡ್ ಪ್ಲಸ್ ಪ್ರಶಸ್ತಿ ಪಡೆದಿರುವುದು ತುಂಬಾ ಸಂತಸವಾಗಿದೆ ಎಂದು ಚಾಮರಾಜನಗರ ರೋಟರಿ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ನೂತನ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿರುವ ಅಬ್ದುಲ್ ಅಜೀಜ್ ಅವರು ಕೂಡ ಅವಧಿಯಲ್ಲಿ ಹೆಚ್ಚಿನ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಚಾಮರಾಜನಗರ ರೋಟರಿ ಸಂಸ್ಥೆಯ ಕೀರ್ತಿಯನ್ನು ಬೆಳಗಲಿ ಎಂದು ಶುಭ ಕೋರಿದರು.
ನಿರ್ಗಮಿತ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, 2025-26ನೇ ಸಾಲಿನ ರೋಟರಿ ಚಾಮರಾಜನಗರದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ, ಪ್ರತಿಭಾ ಪುರಸ್ಕಾರ, ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮ, ಫಲ್ಸ್ ಪೊಲಿಯೋ ಹಾಗೂ ಟಿ.ಆರ್.ಎಫ್. ಗೆ ದೇಣಿಗೆ ಹಾಗೂ ಇತರ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದಕ್ಕೆ ನಮ್ಮ ಸಂಸ್ಥೆಗೆ 3181 ಹೈಯೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ ಬಂದಿರುತ್ತದೆ.“ಡೈಮಂಡ್ ಪ್ಲಸ್” ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೂ ಅತ್ಯಂತ ಸಂತೋಷವಾಗಿದೆ.ನಮ್ಮ ಅವಧಿಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೂ ಸಹಕರಿಸಿದ ರೋಟರಿ ಸಹ ಮಿತ್ರರು, ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೂ ನಾನು ಅಭಾರಿಯಾಗಿರುತ್ತೇನೆ ಎಂದರು.
ನೂತನ ಅಧ್ಯಕ್ಷ ಅಬ್ದುಲ್ ಅಜೀಜ್ ಮಾತನಾಡಿ, ನನ್ನ ಒಂದು ಅವಧಿಯಲ್ಲಿ ಅತಿ ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ಮಾಡುವ ಜೊತೆಗೆ ಚಾಮರಾಜನಗರ ರೋಟರಿ ಕಣ್ಣಿನ ಆಸ್ಪತ್ರೆ ಮಾಡುವ ಗುರಿಯಿಟ್ಟು ಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಜಿಲ್ಲಾ ಗೌರ್ನರ್ ಎಸ್.ರಮೇಶ್, ವಲಯ ಪ್ರತಿನಿಧಿ ಹೆಚ್.ಎಂ.ಅಜೇಯ ಮಾತನಾಡಿ, ರೋಟರಿ ಸಂಸ್ಥೆ ಯ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ರೋಟರಿ ಉಚಿತ ಡಯಾಲಿಸಸ್ ಸೇವೆಗೆ ಡಿಯುಡಬ್ಲ್ಯೂಜೆಯಿಂದ 10 ಸಾವಿರದ ಚೆಕ್ : ರೋಟರಿ ಸಂಸ್ಥೆ ಚಾಮರಾಜನಗರ ವತಿಯಿಂದ ನಡೆಸುತ್ತಿರುವ ಉಚಿತ ಡಯಾಲಿಸಿಸ್ ಸೇವೆಗೆ ಒಂದು ದಿನದ ಖರ್ಚು ರೂ. 10,000 ರೂ.ಗಳ ಚೆಕ್ ನ್ನು ಜುಲೈ.1 ರ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರದ ವತಿಯಿಂದ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಮಹೇಂದ್ರ ರೋಟರಿ ಜಿಲ್ಲಾ ಗೌರ್ನರ್ ಯಶಸ್ವಿ ಎಸ್.ಸೋಮಶೇಖರ್ ಅವರ ಮುಖಾಂತರ
ಹಸ್ತಾಂತರ ಮಾಡಿದರು.
ಸನ್ಮಾನ: ಎಸ್ಎಸ್ಎಲ್ ಸಿ , ಪಿಯುಸಿ ಪರೀಕ್ಷೆಯ ಹೆಚ್ವು ಅಂಕ ಪಡೆದಿದ್ದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಹಾಸ್, ಇಮ್ರಾನ್, ಎಸ್.ಪ್ರಸಾದ್, ಡಾ.ಶೈಲಜ ಕೃಪಾನಿಧಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.