- ಸಿಮ್ಸ್ ನಲ್ಲಿ ರೋಟರಿ ಸಹಕಾರದಲ್ಲಿ ನಡೆಯುತ್ತಿರುವ ರಕ್ತನಿಧಿ ಕೇಂದ್ರ, ರೋಟರಿ ಡಯಾಲಿಸಿಸ್ ಸೆಂಟರ್ ಗೆ ಭೇಟಿ, ಪರಿಶೀಲನೆ, ಸನ್ಮಾನ.
ಚಾಮರಾಜನಗರ: ಇಲ್ಲಿನ ರೋಟರಿ ಕ್ಲಬ್ ಸೇವೆ ಶ್ಲಾಘನೀಯ ವಾಗಿದೆ ಎಂದು ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ರೋಟರಿ ಮಾಜಿ ಜಿಲ್ಲಾ ಗೌರ್ನರ್ ಡಾ.ರವಿ ವಡ್ಲಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಇಂದು ನಗರದ ಹೊರವಲಯದ ಯಡಬೆಟ್ಟದಲ್ಲಿ ಸಿಮ್ಸ್ ನಲ್ಲಿ ರೋಟರಿ ಸಹಕಾರದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ರಕ್ತನಿಧಿ ಕೇಂದ್ರ, ರೋಟರಿ ಡಯಾಲಿಸಿಸ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ರೋಟರಿ ಭವನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೋಟರಿ ಕಣ್ಣಿನ ಆಸ್ಪತ್ರೆ ಯ ನಕ್ಷೆಯನ್ನು ವೀಕ್ಷಿಸಿದರು. ನಂತರನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿ, ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯಾಗಿದ್ದು,
ರೋಟರಿ ದತ್ತಿ ನಿಧಿಯಿಂದ 48 ಲಕ್ಷ ವೆಚ್ಚದಲ್ಲಿ ಸಿಮ್ಸ್ ಆಸ್ಪತ್ರೆ ರಕ್ತನಿಧಿ ಕೇಂದ್ರ ಸ್ಥಾಪಿಸಿದ್ದು ಅದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ
ರೋಟರಿ ಡಯಾಲಿಸಸ್ ಕೇಂದ್ರದಲ್ಲಿ 499 ರೂ. ಡಯಾಲಿಸಿಸ್ ಸೇವೆ ನೀಡುತ್ತಿರುವುದು ಒಳ್ಳೆಯ ಸೇವೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕಣ್ಣಿನ ಆಸ್ಪತ್ರೆಗೆ ಧನ ಸಹಾಯ ಮಾಡುವೆ: ರೋಟರಿ ಸಂಸ್ಥೆಯು ರೋಟರಿ ಭವನದಲ್ಲಿ
3.5 ರಿಂದ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 25 ಹಾಸಿಗೆಯುಳ್ಳ ಕಣ್ಣಿನ ಆಸ್ಪತ್ರೆಗೆ ರೋಟರಿ ದತ್ತಿನಿಧಿ, ವೈಯುಕ್ತಿಕವಾಗಿ ಮೂಲಸೌಕರ್ಯ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಸನ್ಮಾನ: ಡಾ.ರವಿ ವಡ್ಲಮಣಿ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ,ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಖಜಾಂಚಿ ಆರ್.ಎಂ.ಸ್ವಾಮಿ, ಮಾಜಿ ಜಿಲ್ಲಾ ಗೌರ್ನರ್ ಡಾ.ನಾಗಾರ್ಜುನ ಇತರರು ಭಾಗವಹಿಸಿದ್ದರು.
