ಹೈನುಗಾರಿಕೆ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಯೋಜನೆ: ರೈತರಿಗೆ ವಿವಿಧ ಸೌಲಭ್ಯ ವಿತರಣೆ

ರಾಮನಗರ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ 10 ಲಕ್ಷ ಲೀಟರ್ ದಾಟುವ ನಿರೀಕ್ಷೆ

ರಾಮನಗರ: ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಜಿಲ್ಲೆಯ ಐದು ತಾಲೂಕುಗಳಲ್ಲಿ 21ನೇ ಜಾನುವಾರು ಗಣತಿ ಪ್ರಕಾರ 2,65,472 ದನ ಮತ್ತು ಎಮ್ಮೆಗಳು ಹಾಗೂ 3,22,211 ಕುರಿ ಮತ್ತು ಮೇಕೆಗಳಿವೆ. ಜಿಲ್ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ಹಿಂದೆ ಪ್ರತಿದಿನ ಸುಮಾರು 9.45 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಸರ್ಕಾರ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಿದ ಬಳಿಕ ಹಾಲಿನ ಉತ್ಪಾದನೆಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ದಿನಕ್ಕೆ 10 ಲಕ್ಷ ಲೀಟರ್‌ಗಿಂತಲೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸುಮಾರು 56 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 12,646 ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಕೆಎಂಎಫ್ ವತಿಯಿಂದ ಹಸಿರು ಮೇವು ಬೆಳೆಯಲು ರೈತರಿಗೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಮೇವು ಕತ್ತರಿಸುವ ಯಂತ್ರ ಹಾಗೂ ಪಶುಗಳಿಗೆ ಬಳಸುವ ಕೌವ್ ಮ್ಯಾಟ್‌ಗಳನ್ನು ಇಲಾಖೆಯ ಮೂಲಕ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಯರೇಹಳ್ಳಿ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯ ಆರಂಭಿಸಲಾಗಿದೆ. ಇದರ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ ಸುಮಾರು 2,547 ದನಗಳು ಹಾಗೂ 1,000 ಮೇಕೆಗಳಿವೆ. ಈ ಭಾಗದಲ್ಲಿ ಹಾಲಿನ ಉತ್ಪಾದನೆಯೂ ಹೆಚ್ಚಾಗುತ್ತಿದ್ದು, ಪ್ರಸ್ತುತ ಪ್ರತಿದಿನ ಸುಮಾರು 7 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 300 ರೈತರು ಸದಸ್ಯರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಪಶು ಚಿಕಿತ್ಸಾಲಯ ನಿರ್ಮಿಸಲು ಐದು ಗುಂಟೆ ಜಾಗ ಒದಗಿಸಿದರೆ, ಅಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಿಸಿಕೊಡಲಾಗುವುದು. ಈಗಾಗಲೇ ವಿವಿಧೆಡೆ ಆರ್‌ಐಡಿಎಫ್ ಯೋಜನೆಯಡಿ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಪಶು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಪಶು ಚಿಕಿತ್ಸಾಲಯಗಳ ಅಭಿವೃದ್ಧಿಗೆ ಅನುದಾನ ಕೋರಿ ಸಲ್ಲಿಕೆಯಾಗುವ ಮನವಿಗಳಿಗೂ ಸ್ಪಂದಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *