ಶೂಟ್‌ಔಟ್ ಪ್ರಕರಣ: ಸತ್ಯಶೋಧನಾ ಸಮಿತಿ ವರದಿ ವಿಜಯೇಂದ್ರಗೆ ಸಲ್ಲಿಕೆ

ಹನೂರು : ಕಾವೇರಿ ವನ್ಯಜೀವಿಧಾಮದಲ್ಲಿ ಆಗಸ್ಟ್ 15ರಂದು ನಡೆದ ಅರಣ್ಯ ಇಲಾಖೆ ಶೂಟ್‍ಔಟ್‍ನಲ್ಲಿ ಮೂವರು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಜನತಾ ಪಾರ್ಟಿ, ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆಯಂತೆ ರಚನೆಯಾಗಿದ್ದ ಐವರು ಸದಸ್ಯರ ಸತ್ಯಶೋಧನಾ ಸಮಿತಿ, ಅಧ್ಯಯನ ನಡೆಸಿ ಸಂಗ್ರಹಿಸಿದ ಸ್ಫೋಟಕ ಮಾಹಿತಿಗಳನ್ನೊಳಗೊಂಡ ಸಂಪೂರ್ಣ ವರದಿಯನ್ನು ಬಿಜೆಪಿ ಒಬಿಸಿ ಮೋರ್ಚಾ ಚಾಮರಾಜನಗರ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್ ಅವರು ನೇರವಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹಸ್ತಾಂತರಿಸಿದ್ದಾರೆ.

ಘಟನೆ: ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡುತ್ತಿದ್ದರು ಎಂಬ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿತ್ತು. ಆದರೆ, ಮೃತ ಕುಮಾರ್, ಪೀಟರ್ ಮತ್ತು ಅಂತೋಣಿ ಸ್ವಾಮಿ ಅವರ ಕುಟುಂಬಸ್ಥರು ಇದನ್ನು ತಳ್ಳಿಹಾಕಿದ್ದು, ನಮ್ಮವರು ಬೇಟೆಗಾರರಲ್ಲ, ಹೈನುಗಾರಿಕೆ ಮತ್ತು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮುಗ್ಧ ರೈತರು. ಕಾಡಿಗೆ ಹಸು ಹುಡುಕಲು ಹೋಗಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಅಮಾನವೀಯವಾಗಿ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ನಾಯಕತ್ವ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣದ ಸತ್ಯಾಸತ್ಯತೆ ಹೊರತರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಬಲ ಐವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ನಿರಂಜನ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಸುನಿಲ್ ಥಾಮಸ್ ಅವರೊಂದಿಗೆ, ಕ್ಷೇತ್ರದ ಪ್ರಭಾವಿ ನಾಯಕ ಮತ್ತು ಬಿಜೆಪಿ ಒಬಿಸಿ ಮೋರ್ಚಾ ಚಾಮರಾಜನಗರ ಜಿಲ್ಲಾಧ್ಯಕ್ಷ ಹನೂರು ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿತ್ತು. ಸಮಿತಿಯಲ್ಲಿ ಹನೂರು ವೆಂಕಟೇಶ್ ಅವರು ವಹಿಸಿದ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು.
ಹನೂರು ವೆಂಕಟೇಶ್ ನೇತೃತ್ವದಲ್ಲಿ ಸಮಗ್ರ ಕ್ಷೇತ್ರ ಅಧ್ಯಯನ: ಸಮಿತಿಯ ಸದಸ್ಯರು ಬುಧವಾರ ಹನೂರು ತಾಲೂಕಿನಲ್ಲಿ ಬೀಡುಬಿಟ್ಟು ಸಮಗ್ರ ತನಿಖೆ ನಡೆಸಿದರು. ಮೊದಲು ತೋಮಿಯಾರ್ ಪಾಳ್ಯದ ಚರ್ಚ್‍ಗೆ ಭೇಟಿ ನೀಡಿ ಫಾದರ್ ಚಾಲ್ರ್ಸ್ ಜೋಸೆಫ್ ಅವರನ್ನು ಭೇಟಿಯಾಗಿ ಪ್ರಕರಣದ ಹಿನ್ನೆಲೆ ಮಾಹಿತಿ ಪಡೆದರು. ನಂತರ ಲಾಜರ್ ದೊಡ್ಡಿಯ ಮೃತ ಕುಮಾರ್ ಅವರ ಮನೆ, ಜಗನಾಥ್ ದೊಡ್ಡಿಯ ಮೃತ ಪೀಟರ್ ಅವರ ಮನೆ, ಮರಿಯಮಂಗಲದ ಮೃತ ಅಂತೋಣಿ ಸ್ವಾಮಿ ಅವರ ಮನೆ, ಮತ್ತು ಘಟನಾ ಸ್ಥಳದಿಂದ ಪ್ರಾಣಾಪಾಯದಿಂದ ಪರಾರಿಯಾಗಿದ್ದ ಪ್ರತ್ಯಕ್ಷದರ್ಶಿ ಮಹಿಮಾ ದಾಸ್ ಅವರ ಮನೆಗೆ ಹನೂರು ವೆಂಕಟೇಶ್ ನೇತೃತ್ವದ ತಂಡ ಖುದ್ದು ಭೇಟಿ ನೀಡಿ, ಮೃತರ ಕುಟುಂಬದ ಆರ್ಥಿಕ ಪರಿಸ್ಥಿತಿ, ಅವರು ಮಾಡುತ್ತಿದ್ದ ಕಸುಬು, ಮತ್ತು ಘಟನೆ ನಡೆದ ದಿನದ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಂಡಿತು.

ಇದರೊಂದಿಗೆ ಹನೂರು ಪೆÇಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಎಫ್‍ಐಆರ್ ಮತ್ತು ಪೆÇಲೀಸ್ ತನಿಖೆಯ ಮಾಹಿತಿ ಪಡೆದ ಸಮಿತಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಿಂದಲೂ ಅಧಿಕೃತ ವರದಿಗಳನ್ನು ಸಂಗ್ರಹಿಸಿತು.

ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸಿದ ಹನೂರು ವೆಂಕಟೇಶ್ ಮತ್ತು ತಂಡದವರು, ಅದನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹನೂರು ವೆಂಕಟೇಶ್ ಅವರು, ಹನೂರು ವಿಧಾನಸಭಾ ಕ್ಷೇತ್ರದ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದಿರುವ ಈ ಪ್ರಕರಣ ಅರಣ್ಯ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ. ನಮ್ಮ ತನಿಖೆಯಲ್ಲಿ ಮೂವರನ್ನು ಸಮೀಪದಿಂದಲೇ ಶೂಟ್ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರು ಬೇಟೆಗಾರರಲ್ಲ, ಮುಗ್ಧ ರೈತರು. ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವವರೆಗೂ ಭಾರತೀಯ ಜನತಾ ಪಾರ್ಟಿ ಅವರ ಬೆನ್ನಿಗೆ ನಿಲ್ಲುತ್ತದೆ. ಈ ವರದಿಯ ಸತ್ಯಾಂಶವನ್ನು ಇಡೀ ರಾಜ್ಯದ ಜನರಿಗೆ ತಲುಪಿಸುತ್ತೇವೆ,” ಎಂದು ಗುಡುಗಿದರು.

ಬಿಜೆಪಿ ಸತ್ಯಶೋಧನಾ ಸಮಿತಿಯ ಈ ನಡೆ ಹನೂರು ಭಾಗದಲ್ಲಿ ಬಿಜೆಪಿ ಪಕ್ಷದ ಜನಪರ ಕಾಳಜಿಗೆ ಸಾಕ್ಷಿಯಾಗಿದ್ದು, ವಿಶೇಷವಾಗಿ ಸ್ಥಳೀಯವಾಗಿ ಹನೂರು ವೆಂಕಟೇಶ್ ಅವರ ಜನಪರ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

Leave a Reply

Your email address will not be published. Required fields are marked *