ಹೆಗ್ಗವಾಡಿಪುರ-ದೇಶವಳ್ಳಿಯ ಎಡೆಕಟ್ಟೆ ಬಸಪ್ಪನಿಗೆ ವಿಶೇಷಪೂಜೆ, ಅನ್ನಸಂತರ್ಪಣೆ

  • ಬಿಸಿಬಿಸಿ ಜೋಳದಮುದ್ದೆ, ಹಲಸಿನಕಾಯಿಹುಳಿ, ಕಜ್ಜಾಯ, ಪಾಯಸ, ಪಂಚಾಮೃತ ಸವಿದ ಭಕ್ತರು.

ಚಾಮರಾಜನಗರ:ಕಾರ್ತಿಕ ಮಾಸದ ಅಂಗವಾಗಿ ತಾಲೂಕಿನ ಹೆಗ್ಗವಾಡಿಪುರ -ದೇಶವಳ್ಳಿಯ ಎಡೆಕಟ್ಟೆ ಬಸಪ್ಪನಿಗೆ  ವಿಶೇಷಪೂಜೆ, ಅನ್ನಸಂತರ್ಪಣೆ ನಡೆಯಿತು.

ಚಪ್ಪರಹಾಕಿ ಹಸಿರುತೋರಣಗಳಿಂದ ಶೃಂಗರಿಸಿ, ಎಡೆಕಟ್ಟೆಬಸಪ್ಪನಿಗೆ ವಿಶೇಷ ಅಲಂಕಾರ ಮಾಡಿ, ಬಿಸಿಬಿಸಿ ಜೋಳದಮುದ್ದೆ, ಹಲಸಿನಕಾಯಿಹುಳಿ, ಕಜ್ಜಾಯ, ಪಂಚಾಮೃತ, ಪಾಯಸ ಅನ್ನಸಂಬಾ‌ರ್ ನೈವೇದ್ಯವಿಟ್ಟು ವಿಶೇಷಪೂಜೆ ಸಲ್ಲಿಸಲಾಯಿತು.  ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು, ವಿಶ್ವರೈತ ಸಂಘದ ಸದಸ್ಯ ಹೆಗ್ಗವಾಡಿಪುರ ಮಹೇಶ್‌ ಕುಮಾ‌ರ್ ಮಾತನಾಡಿ. ಹಿಂದೆ ಗ್ರಾಮದಲ್ಲಿ ಮಳೆಯ ಕೊರತೆಯಾದರೆ ರೈತರು ಬೆಳೆದ ಪದಾರ್ಥಗಳನ್ನು ಮನಮನೆಗಳಲ್ಲಿ ಸಂಗ್ರಹಿಸಿ, ಬಸಪ್ಪನ್ನು ತಲೆಮೇಲೆ ಹೊತ್ತು ಗ್ರಾಮದ ಪ್ರತಿಮನೆಗೂ ತೆರಳಿ ಉಯ್ಯೋ ಉಯ್ಯೋ ಮಳೆರಾಯ. ಹೂವಿನ ತೋಟಕ್ಕೆ ನೀರಿಲ್ಲ. ಬಾರೋ ಬಾರೋ ಮಳೆ ಬಿತ್ತಲು ಭೂಮಿ ಗೆ ನೀರಿಲ್ಲ. ಬಿತ್ತಿರುವ ಬೆಳೆಗೆ ನೀರಿಲ್ಲ. ಹಾಡು ಹಾಡಿ. ಗ್ರಾಮದ ಬಸಪ್ಪನಿಗೆ ವಿಶೇಷಪೂಜೆ ಸಲ್ಲಿಸಿದರೆ ಮಳೆಯಾಗುವ ನಂಬಿಕೆಯಿತ್ತು. ಅದರಂತೆ ನಾವು ಕೂಡ ಕಾರ್ತಿಕ ಮಾಸದ ಅಂಗವಾಗಿ ಗ್ರಾಮದ ಎಡೆಕಟ್ಟೆ ಬಸಪ್ಪನಿಗೆ ವಿಶೇಷಪೂಜೆ ಮಾಡಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗ್ರಾಮದ ಸತೀಶ್‌ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಎಡೆಕಟ್ಟೆ ಬಸಪ್ಪನಿಗೆ ವಿಶೇಷಪೂಜೆ ಮಾಡಿ ಬಿಸಿಬಿಸಿ ಜೋಳದಮುದ್ದೆ, ಹಲಸಿನಹುಳಿ, ಕಜ್ಜಾಯ, ಪಾಯಸ, ಅನ್ನಸಂಬಾರ್, ಪಂಚಾಮೃತ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಕಾರ್ಯಕ್ರಮ ಮಾಡಲಾಗಿದೆ. ಎಡೆಕಟ್ಟೆ ಬಸಪ್ಪ ಉತ್ತಮ ಮಳೆ, ಬೆಳೆ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಮುಖಂಡರಾದ ಬಸವಣ್ಣ, ಶಿವಕುಮಾರ್, ಮೂರ್ತಿ, ಮಾದಪ್ಪ, ರಾಜೇಶ್, ರತ್ನಮ್ಮ, ಮಂಜುಳ, ಸುಂದರಮ್ಮ,  ಎಂ.ಎನ್.ಪ್ರಸಾದ್, ಮಹದೇವಪ್ಪ, ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *