- ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಡಾ. ಕೆ. ಮನ್ಮಧರಾವ್
ಚಾಮರಾಜನಗರ: ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸುವುದು ಲೋಕ್ ಅದಾಲತ್‍ನ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಚಾಮರಾಜನಗರ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ. ಕೆ. ಮನ್ಮಧರಾವ್ ಅವರು ತಿಳಿಅಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿಂದು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವರ್ಷದ 2ನೇ ಲೋಕ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿವಿಲ್, ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ವ್ಯಾಜ್ಯಪೂರ್ವ ರಾಜಿಯೋಗ್ಯ ಪ್ರಕರಣಗಳನ್ನು ಗುರುತಿಸಿ ತ್ವರಿತವಾಗಿ ಇತ್ಯರ್ಥಪಡಿಸಲು ಲೋಕ್ ಅದಾಲತ್ ಉತ್ತಮ ವೇದಿಕೆಯಾಗಿದೆ. ಲೋಕ್ ಅದಾಲತ್‍ಗೆ ಕಕ್ಷಿದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ನಿರೀಕ್ಷೆಗಿಂತ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಇದರಿಂದ ಉಭಯ ಕಕ್ಷಿದಾರರ ಸಮಯ, ಹಣ ಉಳಿತಾಯವಾಗಲಿದೆ. ಉಭಯ ಪಕ್ಷಾಕಾರರಲ್ಲಿ ಭಾಂಧವ್ಯ ವೃದ್ಧಿಯಾಗಲಿದೆ ಎಂದರು.
ಲೋಕ್ ಅದಾಲತ್‍ನಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಕೀಲರು ತಮ್ಮ ದೈನಂದಿನ ಕಾರ್ಯಕಲಾಪಗಳ ಜೊತೆಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಎರಡು ಕಡೆಯ ಕಕ್ಷಿದಾರರಿಗೂ ಒಪ್ಪಿಗೆಯಾಗುವಂತೆ ಅವರ ಮನವೊಲಿಸುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ. ಸಾಕಷ್ಟು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ವಕೀಲರು ಕಾಳಜಿ ವಹಿಸುತ್ತಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಶಿಕಾರಕ್ಕೆ ವಕೀಲರ ಸಹಕಾರ ನಿರಂತರವಾಗಿ ಮುಂದುವರೆಯಲಿ ಎಂದು ನ್ಯಾಯಮೂರ್ತಿಗಳಾದ ಡಾ. ಕೆ. ಮನ್ಮಧರಾವ್ ಅವರು ಹಾರೈಸಿದರು.
ಜಿಲ್ಲಾ ಪ್ರದನ ಸೆಷೆನ್ಸ್ ನ್ಯಾಯಾದಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಮಾತನಾಡಿ ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಈ ವರ್ಷದ 2ನೇ ಲೋಕ್ ಅದಾಲತ್ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದೆ. ಲೋಕ್ ಅದಾಲತ್‍ನಿಂದ ಈಗಾಗಲೇ ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಕರಣಗಳ ಇತ್ಯರ್ಥದ ಗುರಿ ಹೊಂದಲಾಗಿದೆ ಎಂದರು.
ಅದಾಲತ್ ಪೂರ್ವ ತಯಾರಿಗಾಗಿ ಜಿಲ್ಲಾ ನ್ಯಾಯಾಲಯದಲ್ಲಿ ತೆರೆಯಲಾಗಿರುವ ಮಧ್ಯಸ್ಥಿಕೆದಾರರ ಸಮನ್ವಯ ಕೇಂದ್ರದಲ್ಲಿ ಎರಡು ಕಡೆಯ ಕಕ್ಷಿದಾರರನ್ನು ಮನವೊಲಿಸಲಾಗಿದೆ. ಪ್ರಕರಣಗಳ ತ್ವರಿತ ಇತ್ಯರ್ಥದಿಂದ ನ್ಯಾಯಾಲಯಗಳ ಹೊರೆ ತಗ್ಗಲಿದೆ. ಪ್ರಕರಣಗಳ ಇತ್ಯರ್ಥದಲ್ಲಿ ವಕೀಲರದ್ದೂ ನಿರ್ಣಾಯಕ ಪಾತ್ರವಾಗಿದೆ. ಒಟ್ಟಾರೆ ಲೋಕ್ ಅದಾಲತ್ ಯಶಸ್ವಿಯಾಗಲಿ ಎಂದು ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ ಅವರು ತಿಳಿಸಿದರು.
ಇದೇ ವೇಳೆ ಸಂತ್ರಸ್ತರಿಗೆ ಪರಿಹಾರದ ಚೆಕ್‍ಗಳನ್ನು ವಿತರಣೆ ಮಾಡಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎಸ್.ಜೆ. ಕೃಷ್ಣ, ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಈಶ್ವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಮಸಮುದ್ರ ಪುಟ್ಟಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.