ಚಾಮರಾಜನಗರ: ಸೈಬರ್ ವಂಚನೆಯ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗುವುದರ ಜೊತೆಗೆ ಇತರರಿಗೂ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸೈಬರ್ ಕ್ರೈಂ ಠಾಣೆಯ ಡಿ.ವೈ.ಎಸ್.ಪಿ. ಎಂ.ಎಸ್. ಪವನ್‍ಕುಮಾರ್ ಅವರು ತಿಳಿಸಿದರು.
ಸೈಬರ್ ಮಾಸಾಚರಣೆ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಸರ್ಕಾರಿ ಐ.ಟಿ.ಐ ಕಾಲೇಜು ಹಾಗೂ ಗುಂಡ್ಲುಪೇಟೆ ಪಟ್ಟಣದ ಜೆ.ಎಸ್.ಎಸ್ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಖಾಯಂ ಹಾಗೂ ಪಾರ್ಟ್‍ಟೈಮ್ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಹಣ ಪಡೆದು ವಂಚಿಸುವ ಸೈಬರ್ ವಂಚಕರು ಹೆಚ್ಚಾಗಿದ್ದಾರೆ. ಈ ಬಗ್ಗೆ ಯುವ ಉದ್ಯೋಗಕಾಂಕ್ಷಿಗಳು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಅರೆಸ್ಟ್ ಮಾಡುವ ಪ್ರಕರಣಗಳು ನಡೆಯುತ್ತಿವೆ. ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ಹಣವನ್ನು ದ್ವಿಗುಣ ಮಾಡುವುದಾಗಿ ವಂಚಿಸುವ ಅಪರಾಧಿಗಳು ಸಹ ಇದ್ದಾರೆ. ಈ ಬಗ್ಗೆ ಜಾಗರೂಕರಾಗಿರಬೇಕೆಂದು ಸಲಹೆ ಮಾಡಿದರು.
ಮೊಬೈಲ್ ಫೋನಿನಲ್ಲಿ ವಾಟ್ಸಾಪ್, ಇನ್‍ಸ್ಟಾಗಾಂ ಮೂಲಕ ಕರೆ ಅಥವಾ ಮೆಸೇಜ್ ಮಾಡಿ ಬೆದರಿಕೆ ಹಾಕುವ ಮೂಲಕ ಮಾನಸಿಕ ಕಿರುಕುಳ ನೀಡುವ ವಂಚಕರು ಇದ್ದು, ಈ ಬಗ್ಗೆ ಎಚ್ಚರಿಕೆಯಿಂದಿರಬೇಕು. ಲೈಂಗಿಕ ವಿಷಯ, ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಬಳಸಿಕೊಂಡು ಮಹಿಳೆಯರನ್ನು ಬೆದರಿಸಿ ಹಣ ಅಥವಾ ಮತ್ತಷ್ಟು ಖಾಸಗಿ ಚಿತ್ರಗಳು ಅಥವಾ ಲೈಂಗಿಕ ಅನುಕೂಲಕ್ಕೆ ಒತ್ತಾಯಿಸುವ ವಂಚಕರ ಬಗ್ಗೆಯೂ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಡಿ.ವೈ.ಎಸ್.ಪಿ ತಿಳಿಸಿದರು.
ಮದುವೆಯ ಹೆಸರಿನಲ್ಲಿ ಅಮಾಯಕ ಮಹಿಳೆಯರ ನಂಬಿಕೆ ಗಳಿಸಿ ವಂಚನೆ ಮಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಮಹಿಳಾ ಸಂಬಂಧಿತ ಪ್ರಮುಖ ಸೈಬರ್ ಪ್ರಕರಣಗಳಲ್ಲಿ ಇದು ಒಂದಾಗಿದೆ. ಆನ್‍ಲೈನ್ ಮಾಟ್ರಿಮೋನಿಯಲ್ ಅಪರಾಧಗಳ ಬಗ್ಗೆ, ನಕಲಿ ಸಾಮಾಜಿಕ ಮಾಧ್ಯಮಗಳ ಫ್ರೋಫೈಲ್, ಕೃತಕ ಬುದ್ದಿಮತ್ತೆ ನಿರ್ಮಿತ ಕಂಟೆಂಟ್, ಸಾಲವಂಚನೆ, ಇನ್ನಿತರ ಸೈಬರ್ ವಂಚಕರ ಬಗ್ಗೆ ಅತ್ಯಂತ ಜಾಗರೂಕತೆ ಹೊಂದಬೇಕು. ಯಾವುದೇ ಸಂಶಯ, ವಂಚನೆ ಪ್ರಕರಣಗಳೆಂದು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ಕ್ರೈಂ ಠಾಣೆಯ ಡಿ.ವೈ.ಎಸ್.ಪಿ ಎಂ.ಎಸ್. ಪವನ್‍ಕುಮಾರ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ವೃಂದದವರು ಉಪಸ್ಥಿತರಿದ್ದರು.