ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗಿ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ

ಚಾಮರಾಜನಗರ: ಮಕ್ಕಳಿಗೆ ಕುಟುಂಬದ ಸದಸ್ಯರ ಜೊತೆ ಬದುಕುವ ಹಕ್ಕು ಇದ್ದು, ಇದಕ್ಕೆ ಚ್ಯುತಿ ಬಾರದಂತೆ ರಕ್ಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಅವರು ತಿಳಿಸಿದರು.

ಮಲ್ಲಯ್ಯನಪುರದ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಅರಿವು ಮತ್ತು ನೆರವು ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಸಂಬಂಧಿಸಿದಂತೆ ಸಾಕಷ್ಟು ಹಕ್ಕುಗಳಿವೆ. ಇವುಗಳಲ್ಲಿ ಬದುಕುವ, ಅಭಿವೃದ್ಧಿ ಹೊಂದುವ, ಭಾಗವಹಿಸುವ, ದೌರ್ಜನ್ಯದಿಂದ ರಕ್ಷಣೆ ಪಡೆಯುವ ಹಕ್ಕುಗಳು ಮುಖ್ಯವಾಗಿದೆ. 6 ರಿಂದ 14 ವರ್ಷದ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು. 14 ವರ್ಷದ ಒಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಮೆಗಾಗಿ ಬಳಸಿಕೊಳ್ಳುವುದು, ಮಕ್ಕಳನ್ನು ಕದ್ದು ಸಾಗಾಣೆ ಮಾಡುವುದು, ಹೆಣ್ಣು ಮಕ್ಕಳನ್ನು ಲೈಂಗಿಕ ಕೃತ್ಯಗಳಿಗೆ ತೊಡಗಿಸುವುದು, ಬಿಕ್ಷಾಟನೆ ಯಂತಹ ಪ್ರಕರಣಗಳು ಕಂಡುಬಂದರೆ ಅಂತಹವರಿಗೆ ಮಕ್ಕಳ ರಕ್ಷಣೆ ಹಕ್ಕುಗಳ ಅಡಿಯಲ್ಲಿ ಕಠಿಣ ಶಿಕ್ಷೆಯಾಗುತ್ತದೆ ಎಂದರು.

ಬಾಲ್ಯವಿವಾಹ ತಡೆಗೆ ಮುಂದಾಗಬೇಕು. ಎಲ್ಲಿಯೇ ಆಗಲಿ ಬಾಲ್ಯವಿವಾಹ ನಡೆಯುವ ಸುಳಿವು ಕಂಡುಬಂದಲ್ಲಿ 1098 ಗೆ ಕರೆ ಮಾಡಬೇಕು ಅಥವಾ ಪೆÇಲೀಸ್ ಠಾಣೆಯ 112ಗೆ ಕರೆ ಮಾಡಿ ದೂರು ಸಲ್ಲಿಸಬೇಕು. ವಿದ್ಯಾರ್ಥಿಗಳು ಅನಗತ್ಯ ವಿಷಯಗಳತ್ತ ಆಕರ್ಷಿತರಾಗದೇ ಕ್ರೀಡೆಗಳ ಬಗ್ಗೆ ಗಮನ ನೀಡಬೇಕು. ಇದರಿಂದ ಆರೋಗ್ಯ ವೃದ್ಧಿ ಮತ್ತು ಓದಿನ ಕಡೆ ಏಕಾಗ್ರತೆ ಹೆಚ್ಚುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ಸಲಹೆ ಮಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹದೇವಸ್ವಾಮಿ ಅವರು ಆದರ್ಶ ವಿದ್ಯಾಲಯವು ಪಟ್ಟಣದ ಹೊರವಲಯದಲ್ಲಿ ಇರುವುದರಿಂದ ರಕ್ಷಣೆಗಾಗಿ ಶಾಲೆಗೆ ಕಾಂಪೌಂಡ್ ವ್ಯವಸ್ಥೆಯಾಗಬೇಕಿದೆ. ಸಂಸ್ಥೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು ಎಂದು ಹೇಳಿದರು. 

ಕಾರ್ಯಕ್ರಮಕ್ಕೂ ಮೊದಲು ಶಾಲಾ ಆವರಣದಲ್ಲಿ ನ್ಯಾಯಾಧೀಶರು ಹಾಗೂ ಇತರೆ ಗಣ್ಯರು ಗಿಡ ನೆಟ್ಟು ನೀರೆರೆದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪನಿರ್ದೇಶಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಲತಾ, ಬಾಲನ್ಯಾಯ ಮಂಡಳಿ ಸದಸ್ಯರಾದ ಗಂಗಾಧರಸ್ವಾಮಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಶಿವಪುರ ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿ ಕೆ.ಎಲ್. ಶಾಂತಮ್ಮ, ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಕೆ.ರಘು, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ವೈದ್ಯಾಧಿಕಾರಿ ಉಮಾರಾಣಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪೈಸೆಲ್ ಉರ್ ರೆಹಮನ್ ಶೆರೀಫ್, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ವಿ.ಜಿ. ತ್ಯಾಗರಾಜಮೂರ್ತಿ, ಪ್ರಾಂಶುಪಾಲರಾದ ಲಿಂಗಯ್ಯ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಅರುಣ್‍ಕುಮಾರ್, ಸಮಷ್ಠಿ ಸಮಗ್ರ ಅಭಿವೃದ್ದಿ ಟ್ರಸ್ಟ್‍ನ ಕಾರ್ಯಕ್ರಮ ಸಂಯೋಜಕರಾದ ಮಣಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *