ಚಾಮರಾಜನಗರ: ಮಹಿಳೆಯರೇ ತಿಂಡಿ ಊಟ ತಯಾರಿಸಿ ವಿಶೇಷ ದರದಲ್ಲಿ ಗ್ರಾಹಕರಿಗೆ ನೀಡುವ ಅಕ್ಕ ಕೆಫೆಯಿಂದ ಮಹಿಳಾ ಸಬಲೀಕರಣ ಮತ್ತು ಹಣಕಾಸು ಬಲವರ್ಧನೆಗೆ ಸಹಾಯಕವಾಗಲಿದೆ ಎಂದು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ತಿಳಿಸಿದರು.
ತೆರಕಣಾಂಬಿಯಲ್ಲಿಂದು ಅಕ್ಕ ಕೆಫೆ ಹಾಗೂ ತೆರಕಣಾಂಬಿ ಹೊರವಲಯ ಹಾಗೂ ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ 176.89 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಲತ್ಯಾಜ್ಯ ನಿರ್ವಹಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ) ಅಡಿಯಲ್ಲಿ ಮಹಿಳೆಯರೇ ಸಂಪೂರ್ಣವಾಗಿ ನಿರ್ವಹಿಸುವ ಅಕ್ಕ ಕೆಫೆಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಿದೆ. ಮಹಿಳೆಯರೇ ಸಂಪೂರ್ಣವಾಗಿ ಅಡುಗೆ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುವ ಅಕ್ಕ ಕೆಫೆ ಉದ್ದೇಶ ಮಹಿಳೆಯರನ್ನು ಆರ್ಥಿಕವಾಗಿ ಸಧೃಡಗೊಳಿಸುವುದಾಗಿದೆ ಎಂದು ಲೋಕಸಭಾ ಸದಸ್ಯರು ಹೇಳಿದರು.
ಪ್ರಸ್ತುತ ತೆರಕಣಾಂಬಿಯಲ್ಲಿ ಆರಂಭವಾಗಿರುವ ಅಕ್ಕ ಕೆಫೆಯನ್ನು ಮಲೆ ಮಹದೇಶ್ವರಬೆಟ್ಟದಲ್ಲಿಯೂ ತೆರೆಯುವ ಉದ್ದೇಶವಿದ್ದು, ತಾಲೂಕುಗಳಲ್ಲಿಯೂ ಆರಂಭವಾದರೆ ಹೆಚ್ಚಿನ ವಹಿವಾಟು ನಡೆಯಲಿದೆ. ಅನ್ನ ಹಾಕುವ ಕಾಯಕ ಶ್ರೇಷ್ಠವಾದದ್ದು, ಮಹಿಳೆಯರಿಂದಲೇ ಎಲ್ಲವು ನಿರ್ವಹಣೆಯಾಗುವ ಅಕ್ಕ ಕೆಫೆಯಲ್ಲಿ ಶುಚಿ ರುಚಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಉತ್ತಮ ಸೇವೆ ನೀಡುವ ಮೂಲಕ ಮಾದರಿಯಾಗಿ ಅಕ್ಕ ಕೆಫೆಯನ್ನು ನಡೆಸಿಕೊಂಡು ಹೋಗಬೇಕು ಎಂದರು.
ಮಲತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣದಿಂದ ಸುತ್ತಮುತ್ತಲ ಗ್ರಾಮಗಳ ಜನರ ಆರೋಗ್ಯ ಮತ್ತು ಸುಸ್ಥಿರ ನೈರ್ಮಲ್ಯಕ್ಕೆ ಉತ್ತೇಜನ ಸಿಗಲಿದೆ. ಗ್ರಾಮೀಣ ಭಾಗದ ಸ್ವಚ್ಚತೆಯ ಕಾಪಾಡುವ ನಿಟ್ಟಿನಲ್ಲಿ ಘಟಕ ನಿರ್ಮಾಣ ಸ್ಥಾಪನೆಯಾಗಿದೆ. ಗ್ರಾಮಗಳಲ್ಲಿ ಮಳೆ ನೀರು, ಚರಂಡಿಗಳು ಸಹ ಸುಗಮವಾಗಿ ಹರಿಯುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿಯೂ ಹೆಚ್ಚು ಗಮನ ನೀಡಬೇಕೆಂದು ಎಂದು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ಅಕ್ಕ ಕೆಫೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಲಿದೆ. ಮೂರು ತಿಂಗಳಿಗೊಮ್ಮೆ ಕೆಫೆ ನಿರ್ವಹಣೆಯನ್ನು ಪರಿಶೀಲಿಸಲಾಗುತ್ತದೆ. ಉತ್ತಮವಾಗಿ ಮುಂದುವರೆಸಿಕೊಂಡು ಹೋಗಲು ಸೂಕ್ತ ಕ್ರಮ ವಹಿಸಲಾಗುತ್ತದೆ. ತಾಲೂಕು ಕೇಂದ್ರಗಳಲ್ಲಿಯೂ ಯಶಸ್ವಿಯಾಗಿ ಅಕ್ಕ ಕೆಫೆ ಪ್ರಾರಂಭಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು.
ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ದಿಯನ್ನೇ ಉದ್ದೇಶವಾಗಿಟ್ಟುಕೊಂಡು ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಮಹಿಳೆಯರನ್ನು ಉತ್ತೇಜಿಸುವ ಕಾರ್ಯಕ್ರಮಗಳಿಗೆ ಜನರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ತಿಳಿಸಿದರು.
ಇದೇ ವೇಳೆ ಜಲ ಅರ್ಪಣ್ ದಿವಸ್ ಅಂಗವಾಗಿ ಜಲ ಜೀವನ್ ಮಿಷನ್ ಯೋಜನೆಯಡಿ ಶೇ. 100ರಷ್ಟು ನಳ ಸಂಪರ್ಕ ಹೊಂದಿ ದಿನದ 24 ಗಂಟೆ ಶುದ್ದ ಕುಡಿಯುವ ನೀರು ಪೂರೈಸುತ್ತಿರುವ ಬಲಚವಾಡಿ ಗ್ರಾಮವನ್ನು 24*7 ನೀರು ಸರಬರಾಜು ಗ್ರಾಮವೆಂದು ಘೋಷಿಸಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗೆ ಪ್ರಮಾಣ ಪತ್ರವನ್ನು ಲೋಕಸಭಾ ಸದಸ್ಯರು, ಶಾಸಕರು ವಿತರಿಸಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಉಮಾಪತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ಕಾರ್ಯದರ್ಶಿ ಶೃತಿ. ಡಿ.ಸಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್.ಎ. ಷಣ್ಮುಗಂ, ಗುರುಶಾಂತಪ್ಪ ಬೆಳ್ಳುಂಡಿ, ಮುಖಂಡರಾದ ನಂಜುಂಡಪ್ರಸಾದ್, ನಂಜಪ್ಪ, ಬಸವರಾಜು, ಬೊಮ್ಮಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related