ಚಾಮರಾಜನಗರ: ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸತನ ಮತ್ತು ಸೃಜನಶೀಲತೆ, ಸಾಧನೆಗೆ ಪ್ರೇರಣೆ ಮತ್ತು ಚೈತನ್ಯದ ಶಕ್ತಿಶಾಲಿ ಸಾಧಕರು ಡಾ. ಎಪಿಜೆ ಅಬ್ದುಲ್ ಕಲಾಂ ರವರು. ವಿಶ್ವದ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಾಗಿ, ಭಾರತದ ರಾಷ್ಟ್ರಪತಿಗಳಾಗಿ, ಭಾರತ ರತ್ನರಾಗಿ ಭಾರತದ ಕೀರ್ತಿಯನ್ನು ವಿಶ್ವದ ಎಲ್ಲೆಡೆ ಹರಡಿ ಗೌರವ ತಂದುಕೊಟ್ಟ ಮಹಾನ್ ವ್ಯಕ್ತಿ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಭಾರತರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜನ್ಮದಿನ, ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಡೀ ವಿಶ್ವದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ದೇಶ ಭಾರತ. ಸುಮಾರು 30 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಮತ್ತು ಕನಸುಗಳನ್ನು ಸಾಕಾರಗೊಳಿಸಿಕೊಂಡು ಜಗತ್ತಿನಲ್ಲಿ ಭಾರತವನ್ನು ಸದೃಢ, ಶ್ರೇಷ್ಠ ಭಾರತವನ್ನಾಗಿ ರೂಪಿಸಬಹುದು. ಯುವಕರು ಮತ್ತು ವಿದ್ಯಾರ್ಥಿಗಳು ವಿಶೇಷವಾಗಿ ಸಾಧನೆಯ ಹಾದಿಯನ್ನು ಸಾಧಿಸಬೇಕು. ಕನಸು ಎಂದರೆ ನಿದ್ದೆಯಲ್ಲಿ ಕಾಣುವುದಲ್ಲ. ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದು ಎಂಬ ಸತ್ಯದ ನುಡಿಯನ್ನು ನುಡಿದು ಜಾಗೃತಗೊಳಿಸಿದ ಕಲಾಂ ರವರು ಭಾರತೀಯರೆಲ್ಲರಿಗೂ ಆದರ್ಶಮಯವಾದ ವ್ಯಕ್ತಿತ್ವ ಹೊಂದಿದವರು. ತಮ್ಮ ನಡೆ, ನುಡಿ,ಜ್ಞಾನದ ಮೂಲಕ ಭಾರತೀಯತೆಯನ್ನು ಮೈಗೂಡಿಸಿಕೊಂಡು ವಿಶ್ವಕ್ಕೆ ಮಹಾನ್ ಕೊಡುಗೆಯನ್ನು ವಿಜ್ಞಾನ,ತಂತ್ರಜ್ಞಾನ, ಬಾಹ್ಯಾಕಾಶ ದಲ್ಲಿ ಅಪಾರ ಸಾಧನೆಯನ್ನು ಮಾಡಿ ವಿಶ್ವಕ್ಕೆ ವಿಶೇಷವಾಗಿ ಭಾರತಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ.
ರಾಕೆಟ್ ಉಡಾವಣೆ ಸೋತಾಗ ನಾಯಕತ್ವದ ಗುಣಗಳಲ್ಲಿ ಸೋಲಿನ ಹೊಣೆಯನ್ನು ಹೊತ್ತುಕೊಂಡು ನಂತರ ಗುರಿ ಸಾಧಿಸಿದ ಮಹಾನ್ ವ್ಯಕ್ತಿ. ಮೌಲ್ಯ ಆಧಾರಿತ ಶಿಕ್ಷಣ, ಕೌಶಲ್ಯ, ಶಿಕ್ಷಣ ಕಲಿಕೆ, ಚಾರಿತ್ರ ನಿರ್ಮಾಣ ಮುಂತಾದ ವಿಚಾರಗಳ ಮಾರ್ಗದರ್ಶಕರು.
ರಾಷ್ಟ್ರಪತಿಗಳಾಗಿ ದೇಶದ ಮೂಲೆಮೂಲೆಗಲ್ಲಿ ಸಂಚರಿಸಿ ಕೋಟ್ಯಾಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸದಾ ಕಾಲ ಉಪನ್ಯಾಸಗಳನ್ನು ನೀಡಿ ವಿದ್ಯಾರ್ಥಿಗಳ ಸಾಧನೆಗೆ ಸ್ಫೂರ್ತಿಯಾದವರು ಅಬ್ದುಲ್ ಕಲಾಂ ರವರು ಕಲಾಂ.
ಭಾರತದ ರಾಷ್ಟ್ರೀಯ ಏಕತೆಯ, ಮಾನವೀಯ ಮೌಲ್ಯದ ಮಹಾನ್ ಸಾಕಾರ ಮೂರ್ತಿ ಕಲಾಂ ರವರನ್ನು ಮತ್ತು ಅವರ ಸಾಧನೆಗಳನ್ನು ಮತ್ತು ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಮತ್ತು ಯುವಕರು ಅನ್ಯ ಮಾರ್ಗದ ಮೂಲಕ ಶೀಘ್ರ ಯಶಸ್ಸಿಗೆ ಕಾರಣವಾಗದೆ, ಶ್ರಮ, ಸ್ಪಷ್ಟ ಗುರಿ, ದೀರ್ಘ ಸಾಧನೆಯ ಮೂಲಕ ಸುದೀರ್ಘ ಶಾಶ್ವತ ಸಾಧನೆಯನ್ನು ಸಾಧಿಸಿ ಎಂದು ಋಗ್ವೇದಿ ತಿಳಿಸಿದರು.
ಶಿಕ್ಷಕಿ ಗೀತಾ ಮಾತನಾಡಿ ಅಬ್ದುಲ್ ಕಲಾಂ ರವರು ಶಿಕ್ಷಣಕ್ಕೆ ಮಹತ್ವ ನೀಡಿದ ಶ್ರೇಷ್ಠ ಜ್ಞಾನಿ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಶೇಷವಾಗಿ ಸ್ಪೂರ್ತಿ ತುಂಬಿದ ವಿಜ್ಞಾನದ ಬಗ್ಗೆ ಬಾಹ್ಯಾಕಾಶದ ಬಗ್ಗೆ ಹೊಸ ಅಭಿವೃದ್ಧಿಯ ಹೊಸ ಕನಸನ್ನು ಬಿತ್ತಿದವರು. ಅಬ್ದುಲ್ ಕಲಾಂ ರವರ ಜನ್ಮದಿನದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದು ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿ ಬಿಕೆ ಆರಾಧ್ಯ ಮಾತನಾಡಿ ಅಬ್ದುಲ್ ಕಲಾಂ ರಾಷ್ಟ್ರೀಯ ಹೆಮ್ಮೆಯ ವ್ಯಕ್ತಿತ್ವ ಹೊಂದಿದವರು. ಕಡುಬಡತನದಲ್ಲಿ ಬೆಳೆದು ಇಡೀ ಜಗತ್ತಿಗೆ ತಮ್ಮ ಬುದ್ಧಿವಂತಿಕೆ ಮತ್ತು ಶ್ರಮ ಸಾಧನೆ ಆಧ್ಯಾತ್ಮ ಶಕ್ತಿಯ ಮೂಲಕ ಪ್ರತಿಯೊಬ್ಬರಿಗೂ ಆದರ್ಶವಾಗಿ ಇದ್ದಾರೆ ಭಾರತೀಯರ ಗೌರವ ಕಲಾಂ ರವರಿಗೆ ಸದಾ ಸಲ್ಲುತ್ತಿದೆ ಎಂದು ತಿಳಿಸಿದರು.
ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ, ಸಾನಿಕ, ಐಶ್ವರ್ಯ, ಅನಿತಾ, ಸ್ಫೂರ್ತಿ, ಕುಸುಮ ಮುಂತಾದವರು ಇದ್ದರು.