ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನೋಡಲ್ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ

  • ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಸೂಚನೆ
ಚಾಮರಾಜನಗರ: ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಉಸ್ತುವಾರಿಗಾಗಿ ಗ್ರಾಮವಾರು ನೇಮಕವಾಗಿರುವ ನೋಡಲ್ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರು ಸಮಸ್ಯೆಗೆ ತಕ್ಷಣವೇ ಸ್ಪಂದಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚಿಸಿದರು. 

ಹನೂರು ಪಟ್ಟಣದ ಪ್ರವಾಸಿಮಂದಿರದಲ್ಲಿ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ನಿಯೋಜಿತ ಗ್ರಾಮಗಳಿಗೆ ನೇಮಕವಾಗಿರುವ ಜಿಲ್ಲಾಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿ ಕುಡಿಯುವ ನೀರಿನ ಬವಣೆ ಪರಿಹರಿಸಬೇಕು. ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಕುಡಿಯುವ ನೀರು ಪೂರೈಕೆಗೆ ಯಾವುದೇ ಹಣದ ಕೊರತೆಯಿಲ್ಲ ಎಂದರು. 

ಗ್ರಾಮಸ್ಥರಿಗೆ ಅವಶ್ಯಕತೆಗೆ ತಕ್ಕಂತೆ ನೀರು ಒದಗಿಸಬೇಕು. ಟ್ಯಾಂಕರ್ ಮೂಲಕ ಸಹ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಸಬೇಕು. ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಅನಾನುಕೂಲ ಕೊರತೆ ಆಗಬಾರದು. ಇದಕ್ಕಾಗಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕುಡಿಯುವ ನೀರಿನ ಸಮಸ್ಯೆ ಪರಿಹಾರ ಹಾಗೂ ಉಸ್ತುವಾರಿಗಾಗಿ ವಿಶೇಷವಾಗಿ ನೇಮಕ ಮಾಡಲಾಗಿದೆ. ಅಧಿಕಾರಿಗಳು ತಮಗೆ ವಹಿಸಿರುವ ಹೊಣೆಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. 

ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸಹ ಪರಿಶೀಲಿಸಬೇಕು. ಎಲ್ಲಿಯಾದರೂ ಕಾಮಗಾರಿ ಸ್ಥಗಿತಗೊಂಡಿದ್ದಲ್ಲಿ ಸಮಸ್ಯೆಗಳು ಇದ್ದಲ್ಲಿ ಕೂಡಲೇ ಪರಿಹಾರಕ್ಕೆ ಮೂಂದಾಗಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಯಾವುದೇ ತೊಡಕುಗಳಿದ್ದರು. ನಿವಾರಣೆ ಮಾಡಬೇಕು. ನಿಮ್ಮ ಆದ್ಯತೆ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದೇ ಆಗಿದೆ ಎಂಬುದನ್ನು ನೋಡಲ್ ಅಧಿಕಾರಿಗಳು ಅರಿತು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ನೋಡಲ್ ಅಧಿಕಾರಿಗಳಾಗಿ ನೇಮಕವಾಗಿರುವ ವಿವಿಧ ಇಲಾಖೆÉಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *