ಚಾಮರಾಜನಗರ: ಕನ್ನಡ ಭಾಷೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳು, ಬ್ಯಾಂಕ್‍ಗಳು ಹಾಗೂ ಸ್ಥಳೀಯ ಸಂಸ್ಥೆಗಳು ಆಡಳಿತದಲ್ಲಿ ಕನ್ನಡ ಕುರಿತ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಮಾತೃಭಾಷೆ ಕನ್ನಡ. ಆಡಳಿತ ಭಾಷೆಯೂ ಆಗಿರುವ ಕನ್ನಡವನ್ನು ಆಡಳಿತ ವ್ಯವಹಾರ ನಡೆಸಲು ಮಾತ್ರವಲ್ಲ, ನಮ್ಮ ಹೃದಯಭಾಷೆಯಾಗಬೇಕು. ಆಗಮಾತ್ರ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ಇರುವ ದೋಷಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ನಿರೀಕ್ಷಿತ ಮಟ್ಟದಲ್ಲಿ ಕನ್ನಡವನ್ನು ನಾವು ಬಳಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕುಮಟ್ಟದ ಇಲಾಖೆಗಳು ಆಡಳಿತದಲ್ಲಿ ಕನ್ನಡ ಕುರಿತ 60*40 ಅಳತೆ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ. 1994ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಅಭಿವೃದ್ದಿ ಪ್ರಾಧಿಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆಡಳಿತದಲ್ಲಿ ಕನ್ನಡ ಅನುಷ್ಠಾನದ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಮೂಲಕ ವರದಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡುತ್ತಿದೆ. 2015ರ ಸಮಗ್ರ ಕನ್ನಡ ಅನುಷ್ಠಾನದ ಪ್ರಕಾರ ಕನ್ನಡವನ್ನು ಮೊದಲ ಭಾಷೆಯಾಗಿ ಕಲಿಯಬೇಕಿದೆ. ಜಿಲ್ಲಾಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿ ಸಭೆಗಳನ್ನು ನಡೆಸಬೇಕು. ರಾಜ್ಯದಲ್ಲಿರುವ ಇತರ ಭಾಷಿಕರಿಗೆ ಕನ್ನಡ ಕಲಿಸಬೇಕು. ಅದಕ್ಕಾಗಿ ಆಡಳಿತ ತರಬೇತಿ ಸಂಸ್ಥೆಗಳು ಅವಶ್ಯವಾಗಿವೆ ಎಂದರು.
ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗೆ ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕು. ಕನಿಷ್ಠ ರೋಗಿಯ ಹೆಸರು, ಉಳಿದ ಮಾಹಿತಿಗಳನ್ನಾದರೂ ಕನ್ನಡದಲ್ಲಿಯೇ ಬರೆಯುವಂತಾಗಬೇಕು. ಬ್ಯಾಂಕ್ ಗಳಲ್ಲಿ ಚಲನ್ ಗಳು ಕನ್ನಡದಲ್ಲಿ ಮುದ್ರಿಸಿರಬೇಕು. ಕನ್ನಡ ಬಾರದ ಬ್ಯಾಂಕ್ ಅಧಿಕಾರಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೆಲ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿಯೇ ಅನುತ್ತೀರ್ಣರಾಗುತ್ತಿರುವುದು ದುರಂತದ ಸಂಗತಿ. ಇದರ ನಿವಾರಣೆಗಾಗಿ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಬೇಕು. ಶತಮಾನ ಕಂಡ ಕನ್ನಡ ಶಾಲೆಗಳನ್ನು ರಾಷ್ಟ್ರನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಖ್ಯಾತ ಕವಿಗಳ ಹೆಸರಿನಲ್ಲಿ ಪಾರಂಪರಿಕ ಶಾಲೆಗಳಾಗಿ ಪರಿವರ್ತಿಸಬೇಕು. ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಆಸ್ತಿ ಹಕ್ಕುಪತ್ರ ನೊಂದಣಿಯಾಗಬೇಕು ಎಂದು ಅಧ್ಯಕ್ಷರು ಹೇಳಿದರು.
ಜಾಗತೀಕರಣದ ವ್ಯಾಮೋಹದಿಂದ ಕನ್ನಡಿಗರೇ ಇಂದು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದು ಕಂಡುಬಂದಿದೆ. ಇದು ಸಲ್ಲದು. ದೇಶದಲ್ಲಿ ಹಿಂದಿ ಭಾಷೆ ಶೇ. 66ರ ವೇಗದಲ್ಲಿ ಬೆಳೆಯುತ್ತಿದೆ. ಇತರೆ ಭಾಷೆಗಳು ಶೇ. 9 ಹಾಗೂ ಕನ್ನಡ ಭಾಷೆಯು ಶೇ. 3.4ರ ವೇಗದಲ್ಲಿ ಬೆಳೆಯುತ್ತಿದೆ. ಇದು ಸಾಕಾಗುವುದಿಲ್ಲ. ರಾಜ್ಯದೆಲ್ಲೆಡೆ ಆಂದೋಲನ ಮಾದರಿಯಲ್ಲಿ ಕನ್ನಡ ಅಭಿಯಾನ ಆರಂಭಿಸಬೇಕಾಗಿದೆ. ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ ಬಳಕೆಗೆ ತೊಡಕಾಗದಂತೆ ಎಚ್ಚರ ವಹಿಸಬೇಕು. ರಸ್ತೆಗಳು ಹಾಗೂ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ಕೈಗಾರಿಕೆಗಳಲ್ಲಿ ಶೇ. 40ರಷ್ಟು ಉದ್ಯೋಗಗಳನ್ನು ಸ್ಥಳಿಯ ಕನ್ನಡಿಗರಿಗೆ ಮೀಸಲಿರಿಸುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲಾ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಗೆ ಭೇಟಿ ನೀಡಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿರುವ ಕುರಿತು ಪರಿಶೀಲಿಸಲಾಗುವುದು. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ನಿಗದಿತ ಪ್ರಮಾಣದ ಉದ್ಯೋಗ ಲಭ್ಯತೆ ದೊರಕಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಬಿ.ಆರ್.ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಹಿರಿಯ ಸದಸ್ಯರಾದ ಡಾ. ಗುರುರಾಜ್, ರೂಬಿನ್ ಸಂಜಯ್, ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಅರುಣ್ ಕುಮಾರ್, ಪಿ. ಮಹೇಶ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.