- ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮಧುಕುಮಾರ್ ಘೋಷಣೆ
ಮೈಸೂರು: ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ 2025-26 ನೇ ವಾರ್ಷಿಕ ಸಾಮಾನ್ಯ ಮಹಾಸಭೆ ನಗರದ ಬಿಲ್ಡರ್ ಅಸೋಸಿಯೇಷನ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಭೆಯ ಮೊದಲ ಅಧಿವೇಶನದಲ್ಲಿ 2025-26ನೇ ಸಾಲಿನ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಹಾಗೆಯೇ, ಮುಂದಿನ ಎರಡು ವರ್ಷದ(2026-27 ಹಾಗೂ 2027-28) ಲೆಕ್ಕಪತ್ರ ತಯಾರಿಕೆ ಹಾಗೂ ಯೋಜನೆಯ ಬಗ್ಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಅಸೋಸಿಯೇಷನ್ ವತಿಯಿಂದ ಚೆಸ್ ಆಟಗಾರರಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಸಭೆಯ ಗಮನಕ್ಕೆ ತರುವ ಮೂಲಕ ಸದಸ್ಯರಿಂದ ಮೆಚ್ಚುಗೆ ಹಾಗೂ ಪ್ರಶಂಸೆ ವ್ಯಕ್ತವಾಯಿತು.
ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಸೋಸಿಯೇಷನ್ ಬೆಳವಣಿಗೆ, ಸಂಭಾವಣೆ ಹೆಚ್ಚಿಸುವುದು ಹಾಗೂ ವಿವಿಧ ಕಾರ್ಯನ್ಮೋಖ ಕೆಲಸ ಕಾರ್ಯಗಳ ಬಗ್ಗೆ ಸಲಹೆ ನೀಡಿದರು.
ಎರಡನೇ ಅಧಿವೇಶನದಲ್ಲಿ ಚೆಸ್ ಆಟದಲ್ಲಿ ಒಂದೇ ವೇದಿಕೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಸಾಧನೆ ಮಾಡಿರುವ 130 ಚೆಸ್ ಆಟಗಾರರನ್ನು ಗೌರವಿಸಲಾಯಿತು. ವಿಶೇಷವಾಗಿ ಶ್ರವಣದೋಷ, ದೈಹಿಕ ಅಂಗವಿಕಲರು ಹಾಗೂ ವಿಕಲಚೇತರ ಚೆಸ್ ಆಟಗಾರರನ್ನು ಗೌರವಿಸುವ ಮೂಲಕ ವಿಶ್ವ ಕಿವುಡರ ದಿನಾಚರಣೆಗೆ ಅರ್ಥ ಕಲ್ಪಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷರಾದ ಟಿ.ಎನ್.ಮಧುಕರ್ ಮಾತನಾಡಿ, ಸಾಧನೆ ಎಂಬುದು ಯಾರ ಮನೆಯ ಸ್ವತ್ತಲ್ಲ. ಸಾಧನೆಗೆ ಯಾವುದು ಅಡ್ಡಿ ಬರುವುದಿಲ್ಲ. ದೈಹಿಕವಾಗಿ ವೈಪಲ್ಯವಿದ್ದರೂ ಮಾನಸಿಕವಾಗಿ ಸದೃಢವಾಗಿರುವವರು ಸಾಧನೆ ಮಾಡಬಹುದು ಎಂಬುದನ್ನು ಈ ಚೆಸ್ ಆಟಗಾರರು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
ವಿಶ್ವ ಕಿವುಡರ ದಿನಾಚರಣೆಯ ಅಂಗವಾಗಿ ಚೆಸ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಕಿವುಡ ಮತ್ತು ಮೂಕ (ಶ್ರವಣದೋಷವುಳ್ಳ) ಸಾಧಕರಿಗೆ ಸನ್ಮಾನ ಗೌರವಗಳನ್ನು ಸಲ್ಲಿಸುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಎಲ್ಲಾ ರೀತಿಯ ಚೆಸ್ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದರು.
ಮಹಾಸಭೆಗೆ ಅಖಿಲ ಭಾರತ ಚೆಸ್ ಫೆಡರೇಷನ್ ಉಪಾಧ್ಯಕ್ಷರು ಹಾಗೂ ಕರ್ನಾಟಕ ಚೆಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಡಿ.ಪಿ.ಅನಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ವರ್ಷದಂತೆ ಪ್ರತಿವರ್ಷವೂ ಎಲ್ಲರೂ ಒಂದೇ ಎಂಬ ಭಾವನೆಯಿಂದ ಒಂದೇ ವೇದಿಕೆಯಲ್ಲಿ ಎಲ್ಲಾ ರೀತಿಯ ವಿಕಲಚೇತನರು ಹಾಗೂ ಸಾಮಾನ್ಯ ಚೆಸ್ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ಟಿ.ಎನ್.ಮಧುಕರ್ ಅವರು ಪ್ರಕಟಿಸಿದರು.
ವೇದಿಕೆ ಮೇಲೆ ಕಾರ್ಯದರ್ಶಿಯವರಾದ ತೇಜುಕುಮಾರ್ ಎಂ.ಎಸ್., ಉಪಾಧ್ಯಕ್ಷರಾದ ಲಯನ್ ಎಸ್.ಮೂರ್ತಿ, ಎಂ.ಜೆ.ಗಿರೀಶ್, ರಮೇಶ್ ಕೋಟೆ, ಎಂ.ರಾಜು, ಎಂ.ಯು.ಸೌಮ್ಯ, ಖಜಾಂಚಿಯವರಾದ ಬಿ.ಎಚ್.ವಸಂತ್, ಜಂಟಿ ಕಾರ್ಯದರ್ಶಿಗಳಾದ ಜೆ.ಸುರೇಶ್,ಎಂ.ಎಚ್.ಸುರೇಶ್ ಬಾಬು, ನವೀನ್ ಎಸ್ ಹೆಗ್ಡೆ, , ಎಚ್. ಆರ್. ಚೇತನ್ ರಾಮ್, ಪಿ.ಎಸ್.ಸಚಿನ್, ಎಸ್.ಸಿದ್ದಯ್ಯ ಭಾಗವಹಿಸಿದ್ದರು.
