
ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ರವರ ಕೊಡುಗೆಗಳ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಆರ್ ಗುಂಡೂರಾವ್ ಮರೆಯಲಾಗದ ವ್ಯಕ್ತಿತ್ವ. ಕ್ಷಣಮಾತ್ರದಲ್ಲಿ ನಿರ್ಧಾರಗಳನ್ನು ಕೈಗೊಂಡು ಆಡಳಿತದಲ್ಲಿ ದಕ್ಷತೆ ಹಾಗೂ ನಿರ್ಧಾರಗಳನ್ನು ಕೈಗೊಂಡ ಮುಖ್ಯಮಂತ್ರಿ ಗುಂಡೂರಾಯರು. ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು,ಇಂಜಿನಿಯರಿಂಗ್ ಸಂಸ್ಥೆಗಳು ಇವರ ಕಾಲದಲ್ಲಿ ಸ್ಥಾಪಿತವಾದವು. ಮೈಸೂರಿನಲ್ಲಿ ಕಲಾಮಂದಿರ, ಬೆಂಗಳೂರಿನ ಬಸ್ ನಿಲ್ದಾಣ,ಗುಂಡೂರಾಯರ ಕೊಡುಗೆ. ಕನ್ನಡದ ಏಳಿಗೆಗಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಆರಂಭಿಸಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ವಿಶ್ವ ಮಾನ್ಯಗೊಳಿಸಿದ ಗುಂಡೂರಾಯರು ಕನ್ನಡಿಗರ ಮಾದರಿ ಮುಖ್ಯಮಂತ್ರಿ ಎಂದು ತಿಳಿಸಿದರು. ಅವರ ಕಾಲದಲ್ಲಿ ರೈತ ಹೋರಾಟ ಮತ್ತು ಗೋಕಾಕ್ ಚಳುವಳಿ ಅವರಿಗೆ ಸ್ವಲ್ಪ ಹಿನ್ನಡೆಯನ್ನು ಉಂಟುಮಾಡಿತು ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಆರ್ ಗುಂಡೂರಾವ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ಆರ್ ಗುಂಡೂರಾಯರು ರೈತರಿಗೆ ಅಪಾರ ಕೊಡುಗೆ ನೀಡಿದ್ದಾರೆ. ನೀರಾವರಿ,ವಿದ್ಯುತ್ ಹಾಗೂ ರೈತರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ತಮ್ಮ ದಿಟ್ಟ ನಿರ್ಧಾರದ ಮೂಲಕ ಬಗೆಹರಿಸಿದ ಅಪರೂಪದ ಮುಖ್ಯಮಂತ್ರಿ ಎಂದು ಬಣ್ಣಿಸಿ ಕನ್ನಡ ಸಾಹಿತ್ಯ ಪರಿಷತ್ತು ಗುಂಡೂರಾವ್ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿರುವುದು ಮೆಚ್ಚುಗೆಯ ಸಂಗತಿ ಎಂದರು.
ಬರಹಗಾರ ಎಸ್. ಲಕ್ಷ್ಮೀನರಸಿಂಹ ಮಾತನಾಡಿ ಸಾವಿರಾರು ಶಿಕ್ಷಕ ಹುದ್ದೆಯನ್ನು ನೇಮಿಸಿ, ಶಿಕ್ಷಣ ಕ್ಷೇತ್ರವನ್ನು ಬದಲಾವಣೆ ತರುವದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೈಗಾರಿಕೆ, ನೀರಾವರಿ, ಶಿಕ್ಷಣ, ಕಟ್ಟಡಗಳ ನಿರ್ಮಾಣ, ರಸ್ತೆಯ ನಿರ್ಮಾಣ ಹಾಗೂ ಪ್ರತಿ ಜನಾಂಗಕ್ಕೂ ಶಿಕ್ಷಣ ಹಾಗೂ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ರಾಜ್ಯ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ ಗುಂಡೂರಾವ್ ರವರು ನೇರನಡೆ -ನುಡಿಯ ವ್ಯಕ್ತಿತ್ವ ಹೊಂದಿದವರು.ಅವರ ಕನ್ನಡ ಪ್ರೇಮ ಅಪಾರ. ಬೆಂಗಳೂರಿನಲ್ಲಿ ವಿಶ್ವ ಪ್ರಸಿದ್ಧವಾದ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ರೂಪಿಸಿ ಮಾದರಿ ರಾಜ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಕನ್ನಡ ಹೋರಾಟಗಾರ ಪಣ್ಯದ ಹುಂಡಿ ರಾಜು ಮಾತನಾಡಿ ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಮೇಲೆ ತುಂಬಾ ಪ್ರಭಾವ ಬೀರಿದವರು ಗುಂಡೂರಾಯರು. ಮೈಸೂರಿನಲ್ಲಿ ಆರ್ ಗುಂಡುರಾವ್ ಮತ್ತು ವಾಟಾಳ್ ನಾಗರಾಜ್ ರವರ ಭಾಷಣದಿಂದಲೇ ನಾವೆಲ್ಲರೂ ಕನ್ನಡದ ಅಭಿಮಾನಿಗಳಾಗಿ ಇಂದಿಗೂ ಕನ್ನಡ ಹೋರಾಟಕ್ಕಾಗಿ ನಮ್ಮ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿ ಗುಂಡೂರಾಯರ ಆ ದಕ್ಷ ಆಡಳಿತ ನಮಗೆಲ್ಲರಿಗೂ ಸ್ಫೂರ್ತಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್.ಶಿವಲಿಂಗ ಮೂರ್ತಿ, ಪದ್ಮ ಪುರುಷೋತ್ತಮ್, ಕಾಗಲ ವಾಡಿ ರಂಗಸ್ವಾಮಿ, ಶ್ರೀಮತಿ ಮಾಲಿನಿ, ಆಲೂರು ರಮೇಶ್ ಇದ್ದರು.
