ಹನೂರು:ಹನೂರು ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಈ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದು ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ ಮಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮಾನಸ ಫೌಂಡೇಶನ್ (ರಿ) ಹನೂರು, ಮಾನಸ ಶಿಕ್ಷಣ ಸಂಸ್ಥೆ (ರಿ) ಕೊಳ್ಳೇಗಾಲ ಇವರ ಆಶ್ರಯದಲ್ಲಿ ಮೈಂಡ್ಸ್ ಕೋಡಿಂಗ್ ಅಕಾಡೆಮಿ, ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಶಿಕ್ಷಣ ಮುಗಿದ ನಂತರ ಮಕ್ಕಳ ಮುಂದಿನ ಭವಿಷ್ಯವೇನು ಎಂಬ ಚಿಂತೆ ಎಲ್ಲಾ ಪೋಷಕರದ್ದಾಗಿರುತ್ತದೆ. ಯುವಜನತೆ ಉದ್ಯೋಗವನ್ನು ಪಡೆದುಕೊಳ್ಳಲು ಸತತ ಪ್ರಯತ್ನ ಮಾಡುತ್ತಾರೆ. ಈ ದಿನ 60ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸಿವೆ. ಇಷ್ಟು ಕಂಪನಿಗಳನ್ನು ಆಹ್ವಾನಿಸುವುದು ಸುಲಭದ ಮಾತಲ್ಲ. ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಮಾತ್ರ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸಾಧಿಸುವ ಪ್ರತಿಭೆ, ಛಲ ಹೊಂದಿದ್ದರೆ ಖಂಡಿತ ಉತ್ತಮ ಅವಕಾಶವನ್ನು ಪಡೆಯುತ್ತಾರೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಮಾರ್ಗದರ್ಶನವೂ ಕೂಡ ಮುಖ್ಯ. ಉದ್ಯೋಗವು ವ್ಯಕ್ತಿಗೆ ಆತ್ಮಗೌರವವನ್ನು ತಂದುಕೊಡುತ್ತದೆ ಮತ್ತು ಸಮಾಜದ ಅಭಿವೃದ್ಧಿಗೆ ನೆರವಾಗುತ್ತದೆ. ಈ ಬೃಹತ್ ಉದ್ಯೋಗ ಮೇಳ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆಯುವಂತಹ ಉದ್ಯೋಗ ಮೇಳವಾಗಿದೆ ಎಂದರು.
ಮಾನಸ ಫೌಂಡೇಶನ್ ಅಧ್ಯಕ್ಷರು ಹಾಗೂ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಎಸ್. ದತ್ತೇಶ್ ಕುಮಾರ್ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿಯ ಮೂಲಕ ಯುವಶಕ್ತಿಯನ್ನು ಪ್ರಬಲಗೊಳಿಸುವುದೇ ಈ ಮೇಳದ ಉದ್ದೇಶ. ಕಳೆದ ಆರು ವರ್ಷಗಳ ಹಿಂದೆ ಇದೇ ಹನೂರಿನ ಅಂಬೇಡ್ಕರ್ ಭವನದಲ್ಲಿ 50ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮೇಳ ಆಯೋಜಿಸಿ 720ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗಿತ್ತು. ಪ್ರಸ್ತುತ ಹನೂರು ಮತ್ತು ಕೊಳ್ಳೇಗಾಲ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಈ ಮೇಳ ಆಯೋಜಿಸಲಾಗಿದೆ ಎಂದರು.
ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮಾನಸ ಫೌಂಡೇಶನ್ ವತಿಯಿಂದ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 940 ಮಂದಿ ನೋಂದಣಿಯಾಗಿದ್ದು, ಆನ್‌ಲೈನ್‌ನಲ್ಲಿ 254 (6 ತಿಂಗಳು ವ್ಯಾಲಿಡ್) ಮತ್ತು ಇಂದು ಆಫ್‌ಲೈನ್‌ನಲ್ಲಿ 686 ಮಂದಿ ಭಾಗವಹಿಸಿದ್ದು, ಇದರಲ್ಲಿ 231 ಮಂದಿಗೆ ಆಫರ್ ಲೆಟರ್, 136 ಮಂದಿ ಶಾರ್ಟ್‌ಲಿಸ್ಟ್ ಮತ್ತು 33 ಮಂದಿಗೆ ಡಿಜಿಟಲ್ ಆಫರ್ ಲೆಟರ್ ವಿತರಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್. ನಾಗರಾಜು, ಮೈಂಡ್ಸ್ ಕೋಡಿಂಗ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ತ್ರಿವೇಣಿ, Key2Career ಸಂಸ್ಥೆಯ ನಾಗರಾಜು, ವಿಶೇಷ ಅಧಿಕಾರಿಗಳು, ಪ್ರಾಂಶುಪಾಲರು, ಹನೂರು ಭಾಗದ ಮುಖಂಡರು, ವಿವಿಧ ಕಂಪನಿಗಳ ಹೆಚ್.ಆರ್ ಅಧಿಕಾರಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
