ನೇರ ಫೋನ್ ಇನ್ ಕಾರ್ಯಕ್ರಮ : 34 ದೂರುಗಳು ದಾಖಲು
ಚಾಮರಾಜನಗರ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತ ಇಂದು ನಡೆಸಿದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 34 ದೂರುಗಳು ದಾಖಲಾಗಿವೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನಾನಾ ಭಾಗದಿಂದ ಕರೆ ಮಾಡಿ ಮೂಲಸೌಕರ್ಯಗಳ ಕೊರತೆ, ಕೆಎಸ್.ಆರ್.ಟಿಸಿ ಬಸ್ಸುಗಳ ವ್ಯವಸ್ಥೆ ಸೇರಿದಂತೆ ಹಲವು ಕುಂದು ಕೊರತೆ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.
ತಾಲೂಕಿನ ಮಾದಾಪುರದಿಂದ ಸ್ಥಳೀಯರೊಬ್ಬರು ಮಾತನಾಡಿ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಗೆ ತೊಂದರೆಯಾಗಿದೆ. ಚರಂಡಿ ತುಂಬಿ ದುರ್ವಾಸನೆ ಬರುತ್ತಿದೆ. ಕೂಡಲೇ ಸ್ವಚ್ಚಗೊಳಿಸಬೇಕು. ಬೀದಿ ದೀಪ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿದರು. ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಿ ಅಗತ್ಯ ಕ್ರಮ ವಹಿಸಲು ಸೂಚಿಸುವುದಾಗಿ ತಿಳಿಸಿದರು.
ಹನೂರು ತಾಲೂಕಿನ ಹುತ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಹೆಚ್ಚಾಗಿದೆ. ಕೆರೆಗೆ ನೀರು ತುಂಬಿಸಿದರೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸ್ಥಳೀಯರೊಬ್ಬರು ಮನವಿ ಮಾಡಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ ಅವರು ಕ್ರಮ ವಹಿಸುವುದಾಗಿ ಹೇಳಿದರು.
ನಗರದ ಕರಿನಂಜನಪುರದಿಂದ ನಾಗರಿಕರೊಬ್ಬರು ಕರೆ ಮಾಡಿ ಪಿಡಬ್ಲ್ಯೂಡಿ ಶಾಲೆಯ ಹತ್ತಿರ ಮ್ಯಾನ್ ಹೋಲ್ ಪೈಪ್ ಲೈನ್ ಗಾಗಿ ಗುಂಡಿ ತೆಗೆದು ಬಹಳ ದಿನಗಳಿಂದ ಹಾಗೆಯೇ ಬಿಡಲಾಗಿದೆ. ಇದರಿಂದ ಓಡಾಟಕ್ಕೆ ತೊಂದರೆಯಾಗಿದೆ ಎಂದು ಗಮನಸೆಳೆದರು. ಜಿಲ್ಲಾಧಿಕಾರಿಯವರು ಸಭೆಯಲ್ಲಿಯೇ ಇದ್ದ ನಗರಸಭೆ ಪೌರಾಯುಕ್ತರಿಗೆ ಕೂಡಲೇ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದರು.
ಯಳಂದೂರು ಪಟ್ಟಣದ ನಿವಾಸಿಯೊಬ್ಬರು ಮಾತನಾಡಿ ಪಟ್ಟಣದಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಕೊಳ್ಳೇಗಾಲ ಚಾಮರಾಜನಗರಕ್ಕೆ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ ಹೋಗಿ ಬರುತ್ತಿದ್ದಾರೆ. ಆದರೆ ಬಸ್ಸುಗಳು ಪಟ್ಟಣಕ್ಕೆ ಬರುವ ಮೊದಲೇ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿ ಹೋಗಿರುತ್ತದೆ. ಸ್ಥಳೀಯರು ಪ್ರಯಾಣಿಸಲು ಅವಕಾಶವಾಗುತ್ತಿಲ್ಲ. ಹೀಗಾಗಿ ಯಳಂದೂರು ಪಟ್ಟಣದಿಂದಲೇ ಪ್ರತ್ಯೇಕವಾಗಿ ಬಸ್ಸುಗಳು ವ್ಯವಸ್ಥೆಯಾಗಬೇಕೆಂದು ಕೋರಿದರು. ಸಭೆಯಲ್ಲಿದ್ದ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿ ಸೂಕ್ತ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಸಣ್ಣ ಪುಟ್ಟ ಅಂಗಡಿಗಳಲ್ಲಿ ಕಳ್ಳತನವಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಅವರು ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ತೆರಕಣಾಂಬಿಯ ಸರ್ಕಾರಿ ಶಾಲೆ ಬಳಿ ಕಸ ಸುರಿಯಲಾಗುತ್ತಿದ್ದು, ಅನೈರ್ಮಲ್ಯ ವಾತಾವರಣ ನಿರ್ಮಣವಾಗಿದೆ. ಗ್ರಾಮಪಂಚಾಯಿತಿ ವತಿಯಿಂದ ಸ್ವಚ್ಚತೆ ನಡೆಯುತ್ತಿಲ್ಲ. ಈ ಬಗ್ಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಮದು ಸ್ಥಳೀಯರೊಬ್ಬರು ದೂರಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ ಅವರು ಇಂದೇ ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ಸೂಚನೆ ನೀಡಿ ಸ್ವಚ್ಚತೆ ಕೈಗೊಳ್ಳಲು ತಿಳಿಸಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ, ಜಲ ಜೀವನ್ ಮಿಷನ್ ಅಡಿ ನಿರ್ಮಾಣವಾದ ವಾಟರ್ ಟ್ಯಾಂಕ್ ತೆರೆದುಕೊಂಡಿರುವುದು, ನಗರದಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಕೋಚಿಂಗ್ ಸೆಂಟರ್, ಟ್ಯೂಟೋರಿಯಲ್ ನಡೆಯುತ್ತಿರುವ ಬಗ್ಗೆ, ಪಡಿತರ ವಿತರಣೆಯ ಸಮಯ ಫಲಕ ಅಳವಡಿಸದಿರುವುದು, ಅಕ್ರಮ ಮದ್ಯ ಮಾರಾಟ, ಇನ್ನಿತರ ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ನಾಗರಿಕರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.