ಚಾಮರಾಜನಗರ:ಸಚಿವ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಕೋಲಾರದ ಸಾಮಾಜಿಕ ಕಾರ್ಯಕರ್ತ ಸಂದೇಶ್ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಉಪ್ಪಾರ ಜನಾಂಗದ ಮುಖಂಡ ಪಿ.ಮಾದೇಶ್ ಉಪ್ಪಾರ್ ಹೇಳಿದರು.
ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಉಪ್ಪಾರ ಜನಾಂಗ ಹಾಗೂ ದಲಿತ ಜನಾಂಗದ ನಡುವೆ ನಿವೇಶನ ವಿಚಾರಕ್ಕೆ ಸಂಬAಧಿ ಸಿದ ವ್ಯಾಜ್ಯ ಕೋರ್ಟ್ನಲ್ಲಿದ್ದು ಈ ಸಂಬAಧ ಸೋಮವಾರ ಗ್ರಾಮಕ್ಕೆ ಭೇಟಿ ನೀಡುವುದಾಗಿ ಸಂದೇಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಸಂದೇಶ್ ಗ್ರಾಮಕ್ಕೆ ಭೇಟಿ ನೀಡಿದರೆ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗ ಲಿದೆ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಅ.4 ರಿಂದ ಒಂದು ತಿಂಗಳ ಕಾಲ ಜಿಲ್ಲೆಗೆ ಸಂದೇಶ್ ಪ್ರವೇಶವನ್ನು ನಿರ್ಬಂಧಿಸಿ ಆದೇಶಿಸಿದೆ.
ಆದರೆ, ಸಂದೇಶ್ ಅವರು ಟಿ.ನರಸೀಪುರಕ್ಕೆ ಬಂದು ಚಾಮರಾಜನಗರ ಜಿಲ್ಲೆಗೆ ನನ್ನನ್ನು ನಿರ್ಬಂಧಿಸಿರುವುದಕ್ಕೆ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರಣ ಎಂಬುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ, ನಮ್ಮ ಗ್ರಾಮದ ವಿಚಾರಕ್ಕೂ ಸಚಿವ ಸಿ.ಪುಟ್ಟರಂಗಶೆಟ್ಟಿಗೂ ಯಾವುದೇ ಸಂಬ0ಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮದಲ್ಲಿ ಎರಡು ಜನಾಂಗದವರು ಅನೋನ್ಯವಾಗಿದ್ದು ಇಲ್ಲಿಯ ತನಕ ಯಾವುದೇ ಗಲಾಟೆಗಳಾಗಿಲ್ಲ. ನಿವೇಶನ ಪ್ರಕರಣ ಕೋರ್ಟ್ನಲ್ಲಿದ್ದು ಕೋರ್ಟ್ನ ತೀರ್ಪಿಗೆ ಬದ್ಧರಾಗಿದ್ದೇವೆ ಎಂದರು.
ಗ್ರಾಮದ ದಲಿತ ಮುಖಂಡರು ಪದೇ ಪದೇ ಸಂದೇಶ್ ಅವರನ್ನು ಭೇಟಿ ಮಾಡಿ ಗ್ರಾಮಕ್ಕೆ ಆಹ್ವಾನಿಸುತ್ತಿರುವುದು ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು ನ್ಯಾಯ ಕೊಡಿಸಲು ಸಂದೇಶ್ ಅವರೇನು ನ್ಯಾಯಾಧೀಶರ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಗ್ರಾಮದ ಯಜಮಾನರಾದ ಜವರಶೆಟ್ಟಿ, ಕೃಷ್ಣಶೆಟ್ಟಿ, ಮುಖಂಡರಾದ ಶಿವಣ್ಣ, ಕೆಂಪರಾಜು, ದೊರೆಸ್ವಾಮಿ, ಮಾಜಿ ಯಜಮಾನ ವೆಂಕಟೇಶ್, ಗ್ರಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ ಇದ್ದರು.
ವೈ.ಕೆ.ಮೋಳೆ ಗ್ರಾಮದಲ್ಲಿ ಎರಡು ಜನಾಂಗಗಳ ನಡುವೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ವಿಫಲರಾಗಿದ್ದಾರೆ ಎಂದು ಪಿ.ಮಾದೇಶ್ ಆರೋಪಿಸಿದರು.
ಕಳೆದ 4 ವರ್ಷಗಳಿಂದಲೂ ಸಮಸ್ಯೆ ಇದ್ದರೂ ಇಲ್ಲಿಯ ತನಕ ಬಗೆಹರಿಸಲು ಮುಂದಾಗಿಲ್ಲ. ಪೊಲೀಸರು ಶಾಂತಿ ಸಭೆ ಕರೆದಿದ್ದರೂ ಅದನ್ನು ಶಾಸಕರು ರದ್ದುಪಡಿಸಿದರು. ಪದೇ ಪದೇ ಸಂದೇಶ್ ಅವರನ್ನು ಗ್ರಾಮಕ್ಕೆ ಕರೆಯಿಸಲು ನಡೆಸುತ್ತಿರುವ ಹುನ್ನಾರ ಏನೆಂಬುದು ಅರ್ಥವಾಗುತ್ತಿಲ್ಲ. ಇದರ ಹಿಂದೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಕೈವಾಡವಿದೆ ಎಂದು ದೂರಿದರು.
ಕೂಡಲೇ ಸಂದೇಶ್ ಅವರನ್ನು ಶಾಶ್ವತವಾಗಿ ಗಡಿಪಾರು ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮುಂದಾಗಬೇಕು ಎಂದು ಪಿ.ಮಾದೇಶ್ ಆಗ್ರಹಿಸಿದರು.