
ಚಾಮರಾಜನಗರ: ಗ್ರಾಮ ಸ್ವರಾಜ್ಯ, ಖಾದಿ ಮತ್ತು ಗ್ರಾಮೀಣ ಸ್ವಚ್ಛತೆ, ಸತ್ಯ, ಅಹಿಂಸೆ, ಸ್ವಯಂ ಶಿಸ್ತು, ಸೇವಾಮನೋಭಾವ ಹಾಗೂ ಮಾನವೀಯ ಮೌಲ್ಯಗಳು ಗಾಂಧೀಜಿಯವರ ಚಿಂತನೆಯ ಪ್ರಮುಖ ಆಯಾಮಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕುಲಪತಿ ಪೆÇ್ರ. ಎಂ.ಆರ್. ಗಂಗಾಧರ್ ಅವರು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಆವರಣದಲ್ಲಿಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು, ಗಾಂಧೀಜಿಯವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸಿ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಕೇವಲ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿರದೆ, ಇಂದಿನ ಜಾಗತಿಕ ಸಮಾಜಕ್ಕೂ ದಾರಿದೀಪವಾಗಿವೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸ್ವಾವಲಂಬಿ ಮತ್ತು ಸಶಕ್ತ ಗ್ರಾಮಗಳ ನಿರ್ಮಾಣದ ಉದ್ದೇಶವಾಗಿತ್ತು. ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ಗ್ರಾಮೀಣ ಉದ್ಯಮಗಳ ಅಭಿವೃದ್ಧಿ ಹಾಗೂ ಸ್ವಾವಲಂಬನೆಯ ಮೂಲಕ ದೇಶದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಬಹುದು ಎಂಬ ಗಾಂಧೀಜಿಯವರ ಆಶಯ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಖಾದಿಯೂ ಸ್ವಾವಲಂಬನೆ, ಶ್ರಮದ ಗೌರವ ಮತ್ತು ಗ್ರಾಮೀಣ ಆರ್ಥಿಕತೆಯ ಸಂಕೇತವಾಗಿದೆ. ಖಾದಿ ಹಾಗೂ ಗ್ರಾಮೀಣ ಉದ್ಯಮಗಳಿಗೆ ಉತ್ತೇಜನವು ಗ್ರಾಮೀಣ ಜನರ ಜೀವನೋಪಾಯ ಬಲಪಡಿಸುವುದರ ಜೊತೆಗೆ ಸ್ಥಳೀಯ ಆರ್ಥಿಕತೆಯನ್ನು ಸದೃಢಗೊಳಿಸಲಿದೆ. ಸ್ವಚ್ಛ ಭಾರತ ಕಲ್ಪನೆ ಕೇವಲ ಸರ್ಕಾರದ ಜವಾಬ್ದಾರಿಯಾಗದೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸ್ವಚ್ಛತೆ ಹೊರಗಿನ ಪರಿಸರದಿಂದ ಆರಂಭವಾಗಿ ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಜೀವನಶೈಲಿಯಲ್ಲಿಯೂ ಪ್ರತಿಫಲಿಸಬೇಕು. ವಿದ್ಯಾರ್ಥಿಗಳು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯಂತಹ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗಾಂಧೀಜಿಯವರ ಸತ್ಯ, ಅಹಿಂಸೆಯ ತತ್ವಗಳು ಜಗತ್ತಿನ ಸಂಘರ್ಷಗಳಿಗೆ ಮಾನವೀಯ ಪರಿಹಾರದ ಮಾರ್ಗ ತೋರಿಸುತ್ತವೆ. ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕವಲ್ಲದೆ ಸಂವಾದ, ಸಹನೆ ಮತ್ತು ಪರಸ್ಪರ ಗೌರವದ ಮೂಲಕ ಪರಿಹರಿಸಿಕೊಳ್ಳುವ ಮನೋಭಾವವನ್ನು ಯುವಜನತೆ ಬೆಳೆಸಿಕೊಳ್ಳಬೇಕು. ಶಿಕ್ಷಣದ ಉದ್ದೇಶ ಕೇವಲ ಪದವಿ ಪಡೆಯುವುದμÉ್ಟೀ ಅಲ್ಲ, ಶಿಕ್ಷಣವು ವ್ಯಕ್ತಿಯಲ್ಲಿ ಜ್ಞಾನ, ವಿವೇಕ, ಸ್ವಯಂ ಶಿಸ್ತು, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯನ್ನು ಬೆಳೆಸಬೇಕು. ಗಾಂಧೀಜಿಯವರ ಶಿಕ್ಷಣದ ಪರಿಕಲ್ಪನೆಗಳನ್ನು ಪುನರ್‍ಚಿಂತನೆ ಮಾಡುವ ಅಗತ್ಯವಿದೆ ಎಂದು ಕುಲಪತಿಗಳು ಅಭಿಪ್ರಾಯಪಟ್ಟರು.
ಸಮಾಜದ ದುರ್ಬಲರು, ಬಡವರು ಮತ್ತು ಅವಕಾಶ ವಂಚಿತರ ಬಗ್ಗೆ ಕಾಳಜಿ ವಹಿಸಿ, ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮುಂದಾಗುವುದು ನಿಜವಾದ ಗಾಂಧೀಜಿಯವರ ಸ್ಮರಣೆಯಾಗಿದೆ. ವಿದ್ಯಾರ್ಥಿಗಳು ಗಾಂಧೀಜಿಯವರ ಸೇವಾಮನೋಭಾವ, ಸರಳತೆ, ಸತ್ಯನಿμÉ್ಠ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಆರ್. ಮಹೇಶ್, ಡಾ. ಆರ್. ಶಶಿಕಲಾ, ಡಾ. ಮಹಮದ್ ಮುಸ್ತಫಾ ಕಾರ್ಯಕ್ರಮದಲ್ಲಿ ಇದ್ದರು.