- ಪಿಎಂಶ್ರೀ ಜವಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ರೆಹಮಾನ್ ಕಿವಿಮಾತು





ಚಾಮರಾಜನಗರ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ, ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಪಿಎಂಶ್ರೀ ಜವಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ರೆಹಮಾನ್ ತಿಳಿಸಿದರು.
ಹೊನಲು ಅಸೋಸಿಯೇಷನ್‌ನ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆರೋಗ್ಯ, ಮನಸ್ಸು ಹೊಂದಿದರೆ, ಉತ್ತಮವಾದ ಸಮಾಜಸೇವೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಕೂಡಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದರು.
ಅಲುಮ್ನಿ 24ನೇ ಬ್ಯಾಚ್‌ನ ವಿದ್ಯಾರ್ಥಿಗಳು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದ ಪ್ರಭಾವಿತರಾಗಿ ನೀವೂ ಕೂಡಾ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನೊಂದವರಿಗೆ ನೆರವಾಗಬೇಕು ಎಂದರು.
ಬಳ್ಳಾರಿ ನವೋದಯದ ಹಳೆಯ ವಿದ್ಯಾರ್ಥಿ ಹಾಗೂ ಸೇನೆಯ ನಿವೃತ್ತ ಸುಬೇದಾರ್ ಪ್ರಸಾದ್ ಜಿ.ವಿ. ಮಾತನಾಡಿ, ಪ್ರತಿಯೊಬ್ಬರೂ ಕೂಡಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಿಮ್ಮ ದೇಹ ಆರೋಗ್ಯವಾಗಿದ್ದರೆ, ನಿಮ್ಮ ಮನಸ್ಸು ಆರೋಗ್ಯವಾಗಿರುತ್ತದೆ. ನಿಮ್ಮ ಮನಸ್ಸು, ಬುದ್ದಿ ಆರೋಗ್ಯವಾಗಿದ್ದರೆ, ನೀವು ಅತ್ಯುತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದರು.
ಹೊನಲು ಅಸೋಸಿಯೇಷನ್ ಅಧ್ಯಕ್ಷ ಡಾ.ಶಿವಕುಮಾರ್ ಮಾತನಾಡಿ, ಉತ್ತಮ ಆಹಾರವನ್ನು ಸೇವಿಸುವುದರ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಇದರೊಂದಿಗೆ ಯೋಗ, ವ್ಯಾಯಾಮ ಸೇರಿದಂತೆ ಇನ್ನಿತರ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಹವನ್ನು ಸದೃಢವಾಗಿಟ್ಟುಕೊಳ್ಳಿ ಎಂದರು.
ಪ್ರತಿವರ್ಷದAತೆ ಈ ವರ್ಷವೂ ಕೂಡಾ ಆರೋಗ್ಯ ತಪಾಸಣೆ ಶಿಬಿರವನ್ನು ಹೊನಲು ಅಸೋಸಿಯೇಷನ್ (ಹೊಂಡರಬಾಳು ನವೋದಯ ಅಲುಮ್ನಿ) ವತಿಯಿಂದ ಆಯೋಜಿಸಲಾಗಿದೆ.
ನವೋದಯ ವಿದ್ಯಾಲಯದ 24ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರ ವತಿಯಿಂದ ಪ್ರತಿ ವರ್ಷವೂ ಕೂಡಾ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡಾ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಮ್ಸ್ನ ವೈದ್ಯ ತಂಡದವರಿಗೆ ಹಾಗೂ ಜವಹರ ನವೋದಯ ವಿದ್ಯಾಲಯದ ಎಲ್ಲಾ ಶಿಕ್ಷಕ ಸಿಬ್ಬಂದಿವರ್ಗದವರಿಗೆ ದನ್ಯವಾದಗಳನ್ನು ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿದ್ಯಾರ್ಥಿಗಳು, ಜವಹರ ನವೋದಯ ವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ಸೋಲಿಗ ಸಮುದಾಯದ ಶಾಲೆ ಹಾಗೂ ಸಮುದಾಯದವರು ಸೇರಿದಂತೆ 500 ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹೊನಲು ಅಸೋಸಿಯೇಷನ್‌ನ ಕಾರ್ಯದರ್ಶಿ ಹಾಗೂ ಕೈಗಾರಿಕೋದ್ಯಮಿ ಅರ್ಚನಾ ಎಸ್.ಎನ್., ಸಿಮ್ಸ್ನ ಇಎನ್‌ಟಿ ವಿಭಾಗದ ಅಸಿಸ್ಟೆಂಟ್ ಫ್ರೊಫೆಸರ್ ಡಾ.ದಿವಾಕರ್, ಆರ್ಥೋ ವಿಭಾಗದ ಅಸಿಸ್ಟೆಂಟ್ ಪ್ರೊ. ಡಾ.ಹೇಮಂತ್, 6ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಡಾ.ಮಂಜು ಭಾರ್ಗವ್‌ರೆಡ್ಡಿ, ಕ್ಲಿನಿಕ್ ಹೆಡ್ ನರ್ಸ್ ವಾಸಂತಿ, ಸಿಮ್ಸ್ನ ವೈದ್ಯಕೀಯ ತಂಡ
ಹಾಗೂ ನವೋದಯ ಶಾಲೆಯ 24ನೇ ಬ್ಯಾಚ್‌ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.