- ವಿದ್ಯಾರ್ಥಿಗಳಿಗೆ ಶುಭಕೋರಿದ ಎಚ್.ಪಿ.ಮಂಜುನಾಥ್

ಮೈಸೂರು : ನಗರದ ಸರಸ್ವತಿ ಪುರಂ ನಲ್ಲಿ ಇರುವ ಬಸವಮಾರ್ಗ ಉಚಿತ ವಸತಿ ನಿಲಯ ( 2026-27 ನೇ ಸಾಲು) ಭಾನುವಾರ ಉದ್ಘಾಟನೆಗೊಂಡಿತು. ಹುಣಸೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಟೇಪ್ ಕತ್ತರಿಸುವ ಮೂಲಕ ವಸತಿನಿಲಯವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದ ಪ್ರತಿಯೊಂದು ಹಂತದಲ್ಲೂ ಪರೀಕ್ಷೆ ಇರುತ್ತದೆ. ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಷ್ಟೇ ಅಲ್ಲದೆ ಸಾಧನೆ ಅಲ್ಲ. ವೈಯಕ್ತಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಉನ್ನತ ಸಾಧನೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಮತ್ತು ಸಕಾರಾತ್ಮಕ ಮನೋಭಾವಬೇಕು. ಆಗಿದ್ದರಷ್ಟರ ಗುರಿಯನ್ನು ತಲುಪಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಹೊಸ ವಿಷಯಗಳು, ತಂತ್ರಜ್ಞಾನ ಮತ್ತು ನೈಜ ಪ್ರಪಂಚದ ಕೌಶಲ್ಯಗಳನ್ನು ಕಲಿಯಲು ಆಸಕ್ತಿ ತೋರಿಸಬೇಕು.
ಅಧ್ಯಯನ, ವಿಶ್ರಾಂತಿ ಮತ್ತು ಇತರೆ ಚಟುವಟಿಕೆಗಳಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಿ ವೇಳಾಪಟ್ಟಿಯನ್ನು ಅನುಸರಿಸಬೇಕು. ನಿಮ್ಮ ಶೈಕ್ಷಣಿಕ ಜೀವನಕ್ಕೆ ಚಿಕ್ಕ ಮತ್ತು ದೊಡ್ಡ ಗುರಿಗಳನ್ನು ನಿಗದಿಪಡಿಸಿಕೊಂಡು, ಅವುಗಳನ್ನು ಸಾಧಿಸಲು ನೀವೆಲ್ಲರು ಶ್ರಮಿಸಬೇಕು. ಆಗಿದ್ದರಷ್ಟೆ ಜೀವನದಲ್ಲಿ ಗೆಲುವು ಪಡೆಯಲು ಸಾಧ್ಯ ಎಂದು ಶುಭಾಶಯ ಕೋರಿದರು.
ಶ್ರೀಕನ್ನಡ ಟಿವಿ ಚಾನಲ್ ನ ನಿರ್ದೇಶಕಿ ಖುಷಿವಿನು ಮಾತನಾಡಿ, ಸ್ವಾರ್ಥದ ಪ್ರಪಂಚದಲ್ಲಿ ನಮಗಾಗಿ ನಾವು ನೋಡುತ್ತೇವೆ ಆದರೆ ಪರರಿಗಾಗಿ ಮಿಡಿಯುವುದು ವಿರಳ. ಈ ನಿಟ್ಟಿನಲ್ಲಿ ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕರಾದ ಎಸ್. ಬಸವರಾಜು ಅವರು ಪರರಿಗಾಗಿ ದುಡಿಯುತ್ತಿರುವುದರಲ್ಲಿ ಒಬ್ಬರಾಗಿದ್ದಾರೆ. ದಾನಗಳಲ್ಲಿ ದೊಡ್ಡದಾನ ಅನ್ನದಾನ ಮತ್ತು ವಿದ್ಯಾದಾನ ಆ ದಾನವನ್ನು ಮಕ್ಕಳಿಗೆ ಕಲ್ಪಿಸುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏನಾದರೂ ಮಾಡಬೇಕೆಂದು ಮನಗಂಡು ಕುಕ್ಕರಹಳ್ಳಿ ಶಾಲೆಯನ್ನು ದತ್ತು ಪಡೆಯಲಾಯಿತು. ಅಲ್ಲಿದ್ದ ವಿದ್ಯಾರ್ಥಿಗಳು ದೂರದೂರುಗಳಿಂದ ಪ್ರಯಾಣ ಮಾಡುತ್ತಿದ್ದರು. ಅದನ್ನು ಮನಗಂಡು ಬಾಲಕರಿಗೆ ವಿದ್ಯಾರ್ಥಿ ನಿಲಯ ತೆರೆಯಲಾಯಿತು. ಆ ಬಳಿಕ ಬೇರೆ, ಬೇರೆ ಶಾಲೆಯ ವಿದ್ಯಾರ್ಥಿಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅವರಿಗೂ ಕೂಡ ಉಚಿತವಾಗಿ ವಸತಿ ನಿಲಯವನ್ನು ವಿಸ್ತಾರ ಮಾಡಲಾಯಿತು. ಕೇವಲ ನಾಲ್ಕೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ನಮ್ಮ ಉಚಿತ ವಸತಿ ನಿಲಯ ಇಂದು 30 ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಈ ವರ್ಷದಿಂದ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಬಾಕ್ಸ್
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಬಸವಮಾರ್ಗ ಉಚಿತ ವಸತಿ ನಿಲಯದ ಈ ಸಾಲಿನ ಲಕ್ಷಾಂತರ ರೂ. ಬಾಡಿಗೆ ಖರ್ಚುನ್ನು ಎಚ್.ಪಿ.ಮಂಜುನಾಥ್ ವಹಿಸಿಕೊಂಡರು. ಜೊತೆಗೆ ಶ್ರೀಕನ್ನಡ ಟಿವಿ ಚಾನಲ್ ನ ನಿರ್ದೇಶಕಿ ಖುಷಿವಿನು, ವಸತಿ ನಿಲಯದ ವಿದ್ಯಾರ್ಥಿಗಳಿಗೆ ದುಬಾರಿ ಬೆಲೆಯ ಸ್ಕೂಲ್ ಬ್ಯಾಗ್ ಅನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಕುಕ್ಕರಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರ, ಎಸ್ಡಿಎಂಸ್ಸಿ ಅಧ್ಯಕ್ಷ ಸ್ವಾಮಿ, ನಿವೃತ್ತ ಶಿಕ್ಷಕ ಮೋಹನ್ ಕುಮಾರ್, ಪಾಲಕರು, ಮಕ್ಕಳು ಇದ್ದರು.