ಚಾಮರಾಜನಗರ: ಚಾಮರಾಜೇಶ್ವರ ದೇವಸ್ಥಾನಕ್ಕೆ 200 ವರ್ಷ ತುಂಬುವ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ರಾಜಮನೆತನ ಆಹ್ವಾನಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಬೇಕು, ಜು. 28 ರಂದು ನಡೆಯುವ ಚಾಮರಾಜೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿಸಬೇಕು ಎಂದು ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಚಾಮರಾಜೇಶ್ವರ ರಥೋತ್ಸವದ ಸಿದ್ದತೆ ವೀಕ್ಷಿಸಿ ಮಾತನಾಡಿದರು.
ಚಾಮರಾಜೇಶ್ವರ ದೇವಸ್ಥಾನವು ಕರ್ನಾಟಕದ ಪ್ರಸಿದ್ಧ ಹಾಗೂ ಐತಿಹಾಸಿಕ ಶಿವನ ದೇವಾಲಯವಾಗಿದೆ. ಇದನ್ನು 1826ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಚಾಮರಾಜ ಒಡೆಯರ್ ಅವರ ನೆನಪಿಗಾಗಿ ನಿರ್ಮಿಸಿದ್ದಾರೆ.
ಮೈಸೂರು ರಾಜಮನೆತನವು ರಥೋತ್ಸವ ಆರಂಭ ಮಾಡಿದ್ದು, ರಾಜಮನೆತನಕ್ಕೂ ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧವಿದ್ದು, ಕಳೆದ 2 ವರ್ಷಗಳಿಂದ ಸರಿಯಾಗಿ ಮಳೆ,ಬೆಳೆಯಾಗಿಲ್ಲ. ನಗರ ಅಭಿವೃದ್ಧಿ ಹೊಂದುತ್ತಿಲ್ಲ ಆಗಾಗಿ ಚಾಮರಾಜೇಶ್ವರ ದೇವಸ್ಥಾನಕ್ಕೆ 200 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೈಸೂರು ರಾಜಮನೆತನ ಆಹ್ವಾನಿಸಿ ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ ಮಾಡಿಸುವ ಮೂಲಕ ನಗರದ ಜನತೆಗೆ ಒಳ್ಳೆಯದು ಮಾಡಿಸಬೇಕು ಎಂದು ಕೆಲ್ಲಂಬಳ್ಳಿ ಸೋಮನಾಯಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಹೋರಾಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆಲೂರುಮಲ್ಲು, ಗ್ರಾ.ಪಂ.ಮಾಜಿ ಸದಸ್ಯ ಮಹಾದೇವಸ್ವಾಮಿ ಕಲರ್ ಜೊತೆಗಿದ್ದರು.