ಗುಂಡ್ಲುಪೇಟೆಯಲ್ಲಿ ವಿಜೃಂಭಣೆಯ ಭಗೀರಥ ಜಯಂತೋತ್ಸವ

  • ವಿವಿಧ ಕಲಾ ತಂಡಗಳೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಮಹರ್ಷಿ ಭಗೀರಥರ ಭವ್ಯ ಮೆರವಣಿಗೆ

ಗುಂಡ್ಲುಪೇಟೆ: ಪಟ್ಟಣದಲ್ಲಿ ಉಪ್ಪಾರ ಸಮಾಜದ ವತಿಯಿಂದ ಮಹರ್ಷಿ ಭಗೀರಥರ ಜಯಂತೋತ್ಸವವನ್ನು ಅದ್ದೂರಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮಹರ್ಷಿ ಭಗೀರಥರ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಭಗೀರಥ ಪೀಠ, ಚಿನ್ಮುಲಾದ್ರಿ ಶಿಲಾಪುರ ಮಹಾಸಂಸ್ಥಾನದ ಚಿತ್ರದುರ್ಗದ ಪೀಠಾಧಿಪತಿಗಳಾದ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಗುಂಡ್ಲುಪೇಟೆಯಲ್ಲಿ ಉಪ್ಪಾರ ಸಮಾಜದ ಬಂಧುಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಗ್ಗಟ್ಟಾಗಿ ಸೇರಿ ಭಗೀರಥ ಜಯಂತೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಅತ್ಯಂತ ಮುಖ್ಯವಾಗಿದೆ.

ಶೋಷಿತ ಹಾಗೂ ಹಿಂದುಳಿದ ಸಮಾಜಗಳು ಜಾಗೃತರಾಗಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಅಸ್ತ್ರವಾಗಿದ್ದು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು.

ಶಿಕ್ಷಣದಿಂದ ಜ್ಞಾನ, ಸಂಘಟನೆಯಿಂದ ಶಕ್ತಿ ಹಾಗೂ ನ್ಯಾಯಯುತ ಹೋರಾಟದಿಂದ ಹಕ್ಕುಗಳನ್ನು ಪಡೆಯಲು ಸಾಧ್ಯ. ಆದ್ದರಿಂದ ಸಮಾಜದ ಯುವಕರು ವಿದ್ಯಾವಂತರಾಗಿ, ಸಂಘಟಿತರಾಗಿ, ಸಮಾಜದ ಹಿತಕ್ಕಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ಸಮಾಜದ ಘನತೆಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಸರ್ಕಾರಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದವರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದ ಏಳಿಗೆಗಾಗಿ ತಮ್ಮ ಸಂಪೂರ್ಣ ಸಹಕಾರವಿರಲಿದೆ ಎಂದು ಸ್ವಾಮೀಜಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಮಹರ್ಷಿ ಭಗೀರಥರು ನಮ್ಮ ಮೂಲಪುರುಷರಾಗಿದ್ದು, ತಮ್ಮ ತಪೋಶಕ್ತಿಯಿಂದ ಗಂಗೆಯನ್ನು ಧರೆಗೆ ತಂದು ಸಮಸ್ತ ಜೀವಜಗತ್ತಿಗೆ ಅನುಕೂಲ ಮಾಡಿಕೊಟ್ಟ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಮಾಜದ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತಂದು, ಸರ್ಕಾರದ ಮಟ್ಟದಲ್ಲಿ ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿ, ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಹಾಗೂ ಸಂಭ್ರಮದಿಂದ ಮಹರ್ಷಿ ಭಗೀರಥರ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಪೂಜ್ಯ ಸ್ವಾಮೀಜಿಗಳು ದೂರದ ಚಿತ್ರದುರ್ಗದಿಂದ ಆಗಮಿಸಿ ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ತಾಲ್ಲೂಕಿನ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ₹4 ಕೋಟಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.

ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದವರು ಇಷ್ಟು ದೊಡ್ಡ ಪ್ರಮಾಣದಲ್ಲಿ ಒಗ್ಗಟ್ಟಿನಿಂದ ಭಗೀರಥ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜದವರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಸಮಾಜದ ಉನ್ನತಿಗಾಗಿ ತಾವು ಸದಾ ಜೊತೆಯಾಗಿ ನಿಲ್ಲುವುದಾಗಿ ತಿಳಿಸಿದರು.

ಕಲಾತಂಡಗಳ ವೈಭವದ ಮೆರವಣಿಗೆ: ಜಯಂತೋತ್ಸವದ ಅಂಗವಾಗಿ ನಡೆದ ಭವ್ಯ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಮಹರ್ಷಿ ಭಗೀರಥರ ಭಾವಚಿತ್ರವನ್ನು ಅಲಂಕರಿಸಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ್ ಉಪ್ಪಾರ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್. ವಿಜಯ್ ಕುಮಾರ್, ರಾಜ್ಯ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ರಾಮಚಂದ್ರ, ಮಾಜಿ ಪುರಸಭೆ ಅಧ್ಯಕ್ಷ ಪಿ. ಗಿರೀಶ್, ಭೀಮನಬೀಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜಿ. ಶಿವಕುಮಾರ್, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಶಿವಶಂಕರ್, ಗಡಿ ಮನೆ ಯಜಮಾನ ಟಿ. ಮಹೇಶ್, ಶಿವಯ್ಯ ಶೆಟ್ಟಿ, ಟಿ.ಎಂ. ಮಹೇಶ್ ಶೆಟ್ಟಿ, ಅಣ್ಣೂರುಕೇರಿ ಮಲಿಶೆಟ್ಟಿ, ಛೆ. ಮಹದೇವಶೆಟ್ಟಿ, ಬೇಗೂರು ಕೆ. ಮಹದೇವಶೆಟ್ಟಿ, ಅಣ್ಣಯ್ಯ ಬೀಮನಬೀಡು, ಸ್ವಾಮಿ, ಅರಸಶೆಟ್ಟಿ, ಕೂತನೂರು ಗೋಕುಲ ಶೆಟ್ಟಿ, ಗೋಪಾಲ ಶೆಟ್ಟಿ ಗಡಿ, ಕಟ್ಟಿ ಗುರು ಸೇರಿದಂತೆ ಮನೆ ಯಜಮಾನರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *