ರಾಜ್ಯದ ಜಲ ಹಿತಾಸಕ್ತಿ ರಕ್ಷಣೆಗೆ ರಾಜಿಯಿಲ್ಲ – ಕಾನೂನು ಹೋರಾಟ ಚುರುಕು – ಕಾನೂನು ತಂಡಕ್ಕೆ ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ

  • “ದೆಹಲಿಯಲ್ಲಿ ಸಚಿವ ಚಲುವರಾಯಸ್ವಾಮಿ ಮೆಗಾ ಸಭೆ – ಕಾವೇರಿ, ಕೃಷ್ಣಾ, ಮಹದಾಯಿ, ಪೆನ್ನೈಯಾರ್ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ವಾದಕ್ಕೆ ರಣತಂತ್ರ”
  • “ಮೇಕೆದಾಟು DPR, ಅರಣ್ಯ ಅನುಮೋದನೆಗೆ ವೇಗ – ನಾಳೆ CWC ಅಧ್ಯಕ್ಷರೊಂದಿಗೆ ಸಚಿವರ ಮಾತುಕತೆ”

ನವದೆಹಲಿ: ರಾಜ್ಯದ ಜಲ ಹಿತಾಸಕ್ತಿ ರಕ್ಷಣೆಗೆ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ನವದೆಹಲಿಯಲ್ಲಿ ರಾಜ್ಯದ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡದೊಂದಿಗೆ ಮಹತ್ವದ ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಿ, ಕಾನೂನು ಹೋರಾಟ ಚುರುಕುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಕುಶ್‌ವಿಂದರ್ ಮೋಹ್ರಾ, ಮಯಾಂಕ್ ಜೈನ್, AOR ನಿಶಾಂತ್ ಪಾಟೀಲ್, ಐಎಸ್‌ಡಬ್ಲ್ಯೂ ಮುಖ್ಯ ಎಂಜಿನಿಯರ್ ನಂದೀಶ್, ಉಪ ತಾಂತ್ರಿಕ ಸಲಹೆಗಾರ ಅನಂತ್ ಹಾಗೂ ದೆಹಲಿ ಐಎಸ್‌ಡಬ್ಲ್ಯೂ ಕಾರ್ಯನಿರ್ವಾಹಕ ಎಂಜಿನಿಯರ್ ಸ್ವೀಟಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಕಾವೇರಿ, ಕೃಷ್ಣಾ, ಮಹದಾಯಿ, ಪೆನ್ನೈಯಾರ್ ಜಲವಿವಾದಗಳು ಹಾಗೂ ನೆರೆ ರಾಜ್ಯದ ಕಾವೇರಿ-ವೈಗೈ-ಗುಂಡಾರ್ (CVG) ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಸಚಿವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನ್ಯಾಯಾಲಯದಲ್ಲಿ ರಾಜ್ಯದ ಪರವಾಗಿ ಅತ್ಯಂತ ಪ್ರಬಲ, ಸ್ಪಷ್ಟ ಹಾಗೂ ರಾಜಿರಹಿತ ವಾದಗಳನ್ನು ಮಂಡಿಸಬೇಕು ಎಂದು ಕಾನೂನು ತಂಡಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ರಾಜ್ಯದ ಅತ್ಯಂತ ನಿರ್ಣಾಯಕವಾಗಿರುವ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ DPR ಮತ್ತು ಅರಣ್ಯ ಅನುಮೋದನೆ ಪ್ರಕ್ರಿಯೆಗೆ ವೇಗ ನೀಡಲು ಸರ್ಕಾರ ಎಲ್ಲಾ ಹಂತದಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ನಾಳೆ (ಸೆ. 2 ಬೆಳಗ್ಗೆ 10:30ಕ್ಕೆ) ಕೇಂದ್ರ ಜಲ ಆಯೋಗದ (CWC) ಅಧ್ಯಕ್ಷ ಅನುಪಮ್ ಪ್ರಸಾದ್ ಅವರೊಂದಿಗೆ ನೇರ ಮಾತುಕತೆ ನಡೆಸಲಿದ್ದಾರೆ.

ಇದರೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಾಗೂ ಮಹದಾಯಿ ಕೊಳ್ಳದ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಮಟ್ಟದಲ್ಲಿ ಬಾಕಿ ಇರುವ ಅನುಮತಿಗಳನ್ನು ತ್ವರಿತವಾಗಿ ಪಡೆಯಲು ನ್ಯಾಯಾಲಯ ಹಾಗೂ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಮುಂದಿನ ಕಾರ್ಯತಂತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

Leave a Reply

Your email address will not be published. Required fields are marked *