- ಕಾವೇರಿ ಸಂಕಷ್ಟ: ದೆಹಲಿಗೆ ಅಧಿಕಾರಿಗಳ ತಂಡ – ರೈತರ ಹಿತಕ್ಕೆ CWRC, CWMA ಮುಂದೆ ರಾಜ್ಯದ ಬಲವಾದ ವಾದ
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ನೀರಿನ ಕೊರತೆ ಮತ್ತು ರೈತರ ಹಿತರಕ್ಷಣೆಯ ಹಿನ್ನೆಲೆಯಲ್ಲಿ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಬಲವಾಗಿ ಮಂಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನೀರಿನ ಕೊರತೆಯಿರುವ ಬಗ್ಗೆ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ಅಧಿಕಾರಿಗಳ ತಂಡ ಈಗಾಗಲೇ ದೆಹಲಿಗೆ ತೆರಳಿದೆ. ನಿನ್ನೆಯಷ್ಟೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ACS) ಈ ಕುರಿತು ಮಹತ್ವದ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂದು ಸಚಿವರು ವಿವರಿಸಿದರು.
ನೀರಿನ ವಿಚಾರವಾಗಿ ಪದೇಪದೇ ಅರ್ಜಿ ಸಲ್ಲಿಸುತ್ತಿದ್ದ ತಮಿಳುನಾಡಿಗೆ ಸರ್ವೋಚ್ಚ ನ್ಯಾಯಾಲಯವೂ ‘ಪ್ರತಿ ಬಾರಿಯೂ ಕೋರ್ಟ್ ಮೆಟ್ಟಿಲೇರಬೇಡಿ’ ಎಂದು ಬುದ್ಧಿವಾದ ಹೇಳಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಪಾಲಿನ ನೀರನ್ನು ತಮಿಳುನಾಡು ಕೃಷಿ ಚಟುವಟಿಕೆಗಳಿಗೆ ಅತಿಯಾಗಿ ಬಳಸಿಕೊಂಡಿರುವ ಅಂಶವನ್ನು ಇಂದು ಸಲ್ಲಿಸಲಿರುವ ಮೇಲ್ಮನವಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: “ಸರ್ಕಾರ ಸದಾ ರೈತರ ರಕ್ಷಣೆಗೆ ಬದ್ಧವಾಗಿದೆ. ಹೇಮಾವತಿ ಜಲಾನಯನ ಭಾಗದಲ್ಲಿ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗಿದ್ದು, ಹಾರಂಗಿ ಹಾಗೂ ಕೆಆರ್‌ಎಸ್ ಜಲಾಶಯಗಳ ಮೂಲಕವೂ ಅಗತ್ಯ ನೀರನ್ನು ಹರಿಸಲಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.
