ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ : ತಾತ್ಕಾಲಿಕವಾಗಿ ಹೋಟೆಲ್ ಮುಚ್ಚಲು ಜಿಲ್ಲಾಧಿಕಾರಿ ಆದೇಶ

  • ನಗರದ ಹೊರವಲಯದ ಹೋಟೆಲ್ ರೆಸ್ಟೋರೆಂಟ್‍ಗಳಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ದಿಢೀರ್ ಭೇಟಿ, ಪರಿಶೀಲನೆ
  • ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಹಿನ್ನೆಲೆಯಲ್ಲಿ ಹೋಟೆಲ್ ಮಕಾವ್, ಉಡುಪಿ ಗ್ರಾಂಡ್ ರೆಸ್ಟೋರೆಂಟ್ ತಾತ್ಕಾಲಿಕವಾಗಿ ಮುಚ್ಚಲು ಆದೇಶ
ಚಾಮರಾಜನಗರ: ಜಿಲ್ಲಾಧಿಕಾರಿಗಳಾದ ಶ್ರೀರೂಪ ಹಾಗೂ ಉಪವಿಭಾಗಾಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಆಗಿರುವ ದಿನೇಶ್ ಕುಮಾರ್ ಮೀನಾ ಅವರು ನಗರದ ಹೊರವಲಯದಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಉತ್ಪಾದನಾ ಘಟಕಗಳಿಗೆ ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹೋಟೆಲ್ ಮಕಾವ್ ಹಾಗೂ ಉಡುಪಿ ಗ್ರಾಂಡ್ ರೆಸ್ಟೋರೆಂಟ್ ನಲ್ಲಿ ದಾಸ್ತಾನು ಮಾಡಲಾಗಿದ್ದ ದಿನಸಿ ಪದಾರ್ಥಗಳು, ತರಕಾರಿ, ಇನ್ನಿತರ ಸಾಮಾಗ್ರಿಗಳನ್ನು ವೀಕ್ಷಿಸಿದರು. ಈ ವೇಳೆ ಆಹಾರದಲ್ಲಿ ಕೃತಕ ಬಣ್ಣ ಮಿಶ್ರ ಮಾಡಿರುವುದು, ಅಡುಗೆ ಮನೆಯಲ್ಲಿ ಸ್ವಚ್ಚತೆ ಇಲ್ಲದಿರುವುದು ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ, ಗುಣಮಟ್ಟವಿಲ್ಲದ ದಿನಸಿ ಸಾಮಗ್ರಿಗಳು ಕಂಡುಬಂದಿತು. ಹೋಟೆಲ್ ಮಕಾವ್ ನಲ್ಲಿ ತಾಜಾ ಇಲ್ಲದ ಮಾಂಸ, ಮಶ್ರೂಮ್ ಅನ್ನು ರೆಫ್ರಿಜರೇಟರ್ ನಲ್ಲಿ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಹೋಟೆಲ್ ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದರು.

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಕಾರ್ಖಾನೆ ಹಾಗೂ ಕಲರ್ ಟೋನ್ ಉದ್ಯಮ ಸಂಸ್ಥೆಯಲ್ಲಿ ಕಾರ್ಮಿಕರು ಮತ್ತು ಸಿಬ್ಬಂದಿಗಾಗಿ ತಯಾರಿಸಲಾದ ಆಹಾರ ಮತ್ತು ಗುಣಮಟ್ಟವನ್ನು ವೀಕ್ಷಿಸಿದರು. ಇಲ್ಲಿಯೂ ಊಟ ಉಪಹಾರ ಇನ್ನಿತರ ತಿನಿಸುಗಳ ತಯಾರಿಕೆಗಾಗಿ ಸಂಗ್ರಹಿಸಲಾಗಿದ್ದ ದಿನಸಿ ಪದಾರ್ಥಗಳನ್ನು ಪರಿಶೀಲಿಸಿದರು. ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬೇಕು. ಸ್ವಚ್ಚತೆ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ನಿರ್ದೇಶನ ನೀಡಿದರು.

ಬದನಗುಪ್ಪೆ ಮುಖ್ಯ ರಸ್ತೆಯಲ್ಲಿರುವ ರಾಜಸ್ಥಾನಿ ಹೋಟೆಲ್‍ಗೆ ಭೇಟಿ ನೀಡಿ ಅಡುಗೆ ಮನೆ ಆಹಾರ ಧಾನ್ಯಗಳ ಸಂಗ್ರಹಣೆ ಹಾಗೂ ಆಹಾರ ಸುರಕ್ಷತೆಗೆ ವಹಿಸಿರುವ ಕ್ರಮಗಳನ್ನು ಪರಿಶೀಲಿಸಿದರು. ಹೋಟೆಲ್‍ನಲ್ಲಿ ಸ್ವಚ್ಚತೆ ಇರಬೇಕು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಶುದ್ದ ಆಹಾರ ತಯಾರಿಸಬೇಕು. ಬೇಕರಿಗಳಲ್ಲಿ ತಾಜಾ ಹಾಗೂ ಬಿಸಿಯಾಗಿ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಾಕೀತು ಮಾಡಿದರು.

ಜಿಲ್ಲಾ ವ್ಯಾಪ್ತಿಗೆ ಬರುವ ಚಾಮರಾಜನಗರ-ನಂಜನಗೂಡು ಹೆದ್ದಾರಿಯಲ್ಲಿರುವ ವಿವಿಧ ರೆಸ್ಟೋರೆಂಟ್ ಹೋಟೆಲ್‍ಗಳಿಗೂ ಸಹ ಭೇಟಿ ಕೊಟ್ಟು ವ್ಯಾಪಕವಾಗಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು. ಭೇಟಿಯ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *