
ಚಾಮರಾಜನಗರ : ಶ್ರೀ ಕೃಷ್ಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ 16ನೇ ವರ್ಷದ ಮೊಸರು ಮಡಿಕೆ ಒಡೆಯುವ ಉತ್ಸವ,ಸಂಭ್ರಮ, ಸಂತೋಷ,ಆನಂದ, ಕೃಷ್ಣ ರಾಧೆ ಹಾಗೂ ಮೊಸರು ಮಡಿಕೆ ಹೊಡೆಯುವ ಸಂಭ್ರಮದ ಮೂಲಕ ನಗರದಲ್ಲಿ ಹರೇ ಕೃಷ್ಣ ಅಲೆಯನ್ನು ಸೃಷ್ಟಿಸಿತು.

ಶ್ರೀ ಕೃಷ್ಣ ಉತ್ಸವ ಸರ್ವರಿಗೂ ಸಂಭ್ರಮಿಸುವ ಹಬ್ಬವಾಗಿದೆ. ಜಾತಿ,ಲಿಂಗ,ಧರ್ಮ ಬೇಧವಿಲ್ಲದೆ ಕೃಷ್ಣ ಆರಾಧನೆ ಕೃಷ್ಣನ ಚಿಂತನೆ ಜಾಗೃತವಾಗಿದೆ. ಕೃಷ್ಣ ಚೈತನ್ಯ ಪ್ರತಿಯೊಬ್ಬರಿಗೂ ಅವಶ್ಯಕ. ಶಿವ ಪಾರ್ವತಿ ಯರು ಜಪಿಸಿದ ರಾಮ ನಾಮ ಜಪ, ಕೃಷ್ಣ ನಾಮ ಜಪ ಮಾನವನಿಗೂ ಮಾದರಿಯಾಗಿದೆ. ಎಲ್ಲಾ ಕ್ಲೇಶ ಗಳ ನಿವಾರಣೆ ಭಗವಂತನ ನಾಮಸ್ಮರಣೆ ಗಳಿಂದ ಸಾಧ್ಯವಾಗುತ್ತದೆ. ಭಗವಂತನ ಸ್ಮರಣೆ,ಸಮಾಜದ ಸೇವೆ, ಸಂಸ್ಕೃತಿಯ ನಿರ್ಮಾಣ ಆಧ್ಯಾತ್ಮ ಜಾಗೃತಿಯ ಕಾರ್ಯದಿಂದ ಮಾನವನ ಜನ್ಮ ಸಾರ್ಥಕವಾಗುತ್ತದೆ ಎಂದು ಮೈಸೂರು ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕಾರುಣ್ಯ ಸಾಗರ ದಾಸರವರು ತಿಳಿಸಿದರು.

ಅವರು ಶ್ರೀಕೃಷ್ಣ ಪ್ರತಿಷ್ಠಾನ ರಥದ ಬೀದಿ ಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ 16 ನೇ ವರ್ಷದ ಮೊಸರು ಮಡಿಕೆ ಒಡೆಯುವ ಉತ್ಸವದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ಶ್ರೀ ಕೃಷ್ಣ ಮಾನವ ಮೌಲ್ಯಗಳ ಚಿಂತಕ. ಧರ್ಮರಕ್ಷಣೆಯನ್ನು ಮಾಡಲು ಮಾನವ ಅವತಾರವಾಗಿ ಶ್ರೀಕೃಷ್ಣನ ಜಗತ್ತಿಗೆ ಅವತರಿಸಿದ. ಮನುಷ್ಯನ ಎಲ್ಲಾ ಕರ್ಮಗಳನ್ನು ಕಳೆಯುವ ಶಕ್ತಿ ಭಗವಂತನ ನಾಮ ಸ್ಮರಣೆಗೆ ಇದೆ. ಕೃಷ್ಣ ಸಂದೇಶಗಳು ಜೀವನಕ್ಕೆ ದಾರಿ ದೀಪವಾಗಲಿದೆ. ಆತ್ಮ ಸಾಕ್ಷಾತ್ಕಾರ ಜಾಗೃತ ವಾಗಲಿ. ಭಗವದ್ಗೀತೆಯ ಅಧ್ಯಯನವು ಅವಶ್ಯಕ. ವ್ಯಾಸ ಮಹರ್ಷಿಗಳು ಗಣಪತಿಯ ಮೂಲಕ ರಚಿಸಿದ ಮಹಾಭಾರತ ಅಮೂಲ್ಯವಾದ ಗ್ರಂಥವಾಗಿದೆ. ಚಾಮರಾಜನಗರದಲ್ಲಿ ನಿರಂತರವಾಗಿ 16 ವರ್ಷಗಳಿಂದಲೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೂಲಕ ಸಾಂಸ್ಕೃತಿಕ,ಆಧ್ಯಾತ್ಮ ಜಾಗೃತಿಯನ್ನು ಮಾಡುತ್ತಿರುವ ಸಂಸ್ಥೆಯಾಗಿರುವುದು ಹೆಮ್ಮೆ ತರುತ್ತದೆ. ಶ್ರೀ ಕೃಷ್ಣ ಪ್ರತಿಷ್ಠಾನ ಅಧ್ಯಕ್ಷರಾದ ಋಗ್ವೇದಿ ಯವರ ಕೃಷ್ಣನ ಸೇವಾಕಾರ್ಯ ಅಭಿನಂದನೀಯವೆಂದರು.

ಉದ್ಘಾಟನೆಯನ್ನು ಮೈಸೂರಿನ ಸಂಸ್ಕೃತಿ ಚಿಂತಕರಾದ ಡಾ. ರಘುರಾಮ್ ವಾಜಪೇಯಿ ರವರು ಮೈಸೂರು ಮತ್ತು ಚಾಮರಾಜನಗರ ಜ್ಞಾನದ ನೆಲವಾಗಿತ್ತು. ಇಲ್ಲಿ ಆಧ್ಯಾತ್ಮ,ಸಂಸ್ಕೃತ, ಕನ್ನಡ ಸಾಹಿತ್ಯ ಅಪಾರವಾಗಿ ಬೆಳೆದಿದೆ. ಬಹು ಹಿಂದೆ ಸಂಸ್ಕೃತ ಭಾಷೆ ಪ್ರಖ್ಯಾತವಾಗಿತ್ತು. ಇಂತಹ ನೆಲ ದಲ್ಲಿ ಶ್ರೀ ಕೃಷ್ಣನ ಜಾಗೃತಿಯ ಕಾರ್ಯಕ್ರಮವನ್ನು ರೂಪಿಸಿ ಕಳೆದ 16 ವರ್ಷಗಳಿಂದ ಮನೆ ಮನೆ ಮಾತಾಗಿರುವ ಶ್ರೀ ಕೃಷ್ಣ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದದ್ದು. ಭಗವದ್ಗೀತೆ ರಾಮಾಯಣ ಮಹಾಭಾರತ ಭಾಗವತ ಗ್ರಂಥಗಳ ಸಾರ ಪ್ರತಿಯೊಬ್ಬರು ಅರಿಯಬೇಕು. ಜೀವನದಲ್ಲಿಕೃಷ್ಣ ಸಂದೇಶ ಪಾಲಿಸುವ ಕಾರ್ಯವನ್ನು ಮಾಡಬೇಕು. ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಮೂಲಕ ಸರ್ವರಿಗೂ ಉನ್ನತವಾದ ಧಾರ್ಮಿಕ ಕಾರ್ಯಕ್ರಮವನ್ನು ರೂಪಿಸಿ ಮಕ್ಕಳಿಗೆ ಯುವಕರಿಗೆ ಅವಕಾಶ ನೀಡಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ತಿಳಿಸಿದರು.

ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ 2010ರಿಂದಲೂ ನಿರಂತರವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಮಡಿಕೆ ಹೊಡೆಯುವ ಉತ್ಸವವನ್ನು ಹಮ್ಮಿಕೊಂಡಿದ್ದು ಕರ್ನಾಟಕದ ಗಡಿ ಭಾಗವಾದ ಚಾಮರಾಜನಗರದ ವಿಶೇಷ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾತಾವರಣ ನಿರ್ಮಿಸಿ ಯುವಕರಲ್ಲಿ ಮತ್ತು ಮಕ್ಕಳಲ್ಲಿ ಏಕತೆಯ ಭಾವನೆಯನ್ನು ಧೈರ್ಯ, ಸಾಹಸ,ಸ್ನೇಹ,ವಿಶ್ವಾಸ, ಕರುಣೆ ಪ್ರೀತಿ,ಸಹಕಾರ, ಗುಣಗಳ ಬೆಳೆಸುವ ಮಡಿಕೆ ಒಡೆಯುವ ಉತ್ಸವ ನಮ್ಮೆಲ್ಲರಲ್ಲೂ ಹೊಸ ಸ್ನೇಹಕ್ಕೆ, ವಿಶ್ವಾಸಕ್ಕೆ,ಪರಸ್ಪರ ಅರಿವಿಗೆ ಅವಕಾಶವಾಗಿದೆ.ಜೀವನದಲ್ಲಿ ನಮ್ಮ ಗುರಿಯನ್ನು ಸಾಧಿಸಲು ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೂಲಕ ಮೃತ್ತಿಕಾ ಪೂಜೆ, ಹೂ ಕಟ್ಟುವ ಸ್ಪರ್ಧೆ, ರಂಗೋಲಿ ಸ್ಪರ್ಧೆ ಕಬಡ್ಡಿ ಸ್ಪರ್ಧೆ, ಕೆಸರುಗದ್ದೆ ಓಟ ಗ್ರಾಮೀಣ ಸಂಸ್ಕೃತಿಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಇದಕ್ಕಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಅರ್ಪಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ದಾನೇಶ್ವರಿ ಮಾತನಾಡಿ ಶ್ರೀಕೃಷ್ಣ ಪ್ರತಿಷ್ಠಾನ ಚಾಮರಾಜನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಮಡಿಕೆ ಒಡೆಯುವ ಉತ್ಸವದ ಮೂಲಕ ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿದೆ. ಶ್ರೀ ಕೃಷ್ಣ ಪ್ರತಿಷ್ಠಾನವನ್ನು ರೂಪಿಸಿ ಕಟ್ಟಿ ಮುಂದುವರೆಸಿಕೊಂಡು ಹೋಗುತ್ತಿರುವ ಋಗ್ವೇದಿ ಯವರಿಗೆ ಹಾಗೂ ಶ್ರಮಿಸಿದವರಿಗೆ ಶಕ್ತಿ ಇಮ್ಮಡಿಯಾಗಲಿ ಎಂದು ಆಶೀರ್ವದಿಸಿದರು.
ಮೊಸರು ಮಡಿಕೆ ಒಡೆಯುವ ಉತ್ಸವ ಇಡೀ ಚಾಮರಾಜನಗರದಲ್ಲಿ ಶ್ರೀ ಕೃಷ್ಣನ ಜೈಂಕಾರದೊಂದಿಗೆ, ಸಂಕೀರ್ತನೆಯ, ನಾದ ಸ್ವರ ಮೂಲಕ ರಥದ ಬೀದಿ, ಚಾಮರಾಜೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತ, ಅಗ್ರಹಾರ ಪ್ರದಕ್ಷಣಾ ಪಥ ವಾಗಿ ಭವ್ಯ ಮೆರವಣಿಗೆ ನಡೆಯಿತು.
ಸಂಕೀರ್ತನೆಯ ಮೂಲಕ ನೆರದ ಸಾವಿರಾರು ಭಕ್ತರಿಗೆ ಹರೇ ರಾಮ ಹರೇ ರಾಮ ರಾಮ ಹರೇ ಹರೇ ಮಂತ್ರ ಹೇಳಿಕೊಂಡು ಮೈಸೂರಿನ ಇಸ್ಕಾನ್ ಸಂಸ್ಥೆಯ ಭಕ್ತರು ನಡೆಸಿಕೊಟ್ಟರು.
ಚಾಮರಾಜನಗರದಲ್ಲಿ ಎಲ್ಲಿ ನೋಡಿದರೂ ಕೃಷ್ಣ ಮತ್ತು ರಾಧೆಯ ವೇಷಧಾರಿಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು. ಬಣ್ಣ ಬಣ್ಣದ ವೇಷ ಮತ್ತು ನುಡಿಗಳ ಮೂಲಕ ಮಕ್ಕಳು ಮತ್ತು ಪೋಷಕರು ಧನ್ಯರಾದರು.
ಅಮಚವಾಡಿಯ ಶ್ರೀ ಕೃಷ್ಣ ತಂಡ, ಮತ್ತು ಅಮಚವಾಡಿ ಬ್ಲೂ ಬಾಯ್ಸ್, ನಗರದ ಸೇವಾ ಭಾರತೀಯ ಮಾಧವ ತಂಡ, ಚಾಮರಾಜನಗರದ ಗೆಳೆಯರ ತಂಡ ಸೇರಿದಂತೆ ಐದು ತಂಡಗಳು ಮೊದಲ ಸಾಲಿನಲ್ಲಿ 21 ಅಡಿ ಎತ್ತರದ ಮೊಸರು ಮಡಿಕೆ ಹಾಗೂ ಬೆಣ್ಣೆ ತೆಗೆಯುವ ಕಾರ್ಯದಲ್ಲಿ ಯಶಸ್ವಿಯಾಗಿ ಕುಣಿದು ಸಂಭ್ರಮಿಸಿ, ಕೃಷ್ಣನಾಮಸ್ಮರಣೆಯನ್ನು ಸ್ಮರಿಸಿದರು.
ಹೂ ಕಟ್ಟುವ ಸ್ಪರ್ಧೆ ರಂಗೋಲಿ ಸ್ಪರ್ಧೆ ಕಬ್ಬಡಿ ಸ್ಪರ್ಧೆ ಕೆಸರುಗದ್ದೆ ಊಟದ ವಿಜೇತರಿಕೆ ಬಹುಮಾನ ಉತ್ತರಿಸಲಾಯಿತು.
ನಗರದ ವಿವಿಧ ಮಹಿಳಾ ಸಂಘಟನೆಗಳ ಮೂಲಕ ವಿಶೇಷವಾದ ಭಜನಾ ಕಾರ್ಯಕ್ರಮ ಅವತಾರ ಡ್ಯಾನ್ಸ್ ಪ್ರವೀಣ್ ಗ್ರೂಪಿನ ವಿಶೇಷ ಕೃಷ್ಣ ನೃತ್ಯ, ನಾಟ್ಯ ಸರಸ್ವತಿ ಕಲಾ ಸಂಸ್ಥೆಯ ಅಕ್ಷತಾ ಜೈನ್ ರ ವರ ತಂಡದ ನೃತ್ಯ, ಪ್ರತಿಕ್ಷಾ ತಂಡದ ನೃತ್ಯ, ಸುರೇಶ್ ನಾಗ್ ರವರ ಗಾಯನ ಸಾವಿರಾರು ಜನರ ಸಂಭ್ರಮಕ್ಕೆ ಮತ್ತು ಸಂತೋಷಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿತು.
. ಮೈಸೂರಿನ ಸೈಕಲ್ ಆಗರಬತ್ತಿಸ್ ಸಂಸ್ಥೆ ಯ 6ಅಡಿ ಎತ್ತರದ 24 ಗಂಟೆಗಳ ಕಾಲ ಸತತವಾಗಿ ಉರಿಯುವ ಗಂಧದಕಡ್ಡಿ ವಿಶೇಷ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಮಚಂದ್ರ, ಉದ್ಯಮಿ ವೆಂಕಟ ನಾಗಪ್ಪ ಶೆಟ್ಟಿ, ಬಸವರಾಜೇಂದ್ರ ಆಸ್ಪತ್ರೆಯ ಡಾ. ಶ್ವೇತಾ ಶಶಿಧರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ದಿನೇಶ್, ಸೈಕಲ್ ಬ್ರಾಂಡ್ ಅಗರಬತ್ತಿ ಸಂಸ್ಥೆಯ ಮಹೇಶ್, ಶ್ರೀ ಕೃಷ್ಣ ಪ್ರತಿಷ್ಠಾನದ ಪ್ರದೀಪ್ ದೀಕ್ಷಿತ್, ಸುರೇಶ್ ನಾಗ್ ಹರದನಹಳ್ಳಿ , ಶರಣ್ಯ ಎಸ್ ಋಗ್ವೇದಿ, ಸುನೀಲ್, ರಾಮ್ ಪ್ರಸಾದ್ , ಇತರರು ಉಪಸ್ಥಿತರಿದ್ದರು
