- ಜಿಲ್ಲಾ ಕುಂಬಾರರ ಸಂಘದಿಂದ ಶಿಕ್ಷಕರ ದಿನಾಚರಣೆ
ಚಾಮರಾಜನಗರ : ಸಮಾಜಮುಖಿ ಕೆಲಸಗಳನ್ನು ಮಾಡಿದ ಮಹನೀಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಜಿಲ್ಲಾ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಹಾಗೂರಾಜ್ಯ ಅಸಂಘಟಿತ ಸಣ್ಣ ಕಾಯಕ ಸಮಾಜಗಳ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಮದ್ದೂರು ವಿರೂಪಾಕ್ಷ ಅವರು ತಿಳಿಸಿದರು.
ನಗರದ ದೇವಾಂಗ ಬೀದಿಯ ೨ನೇ ತಿರುವಿನಲ್ಲಿರುವ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜಿಲ್ಲಾ ಕುಂಬಾರರ ಸಂಘದಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರಪತಿ, ತತ್ವಶಾಸ್ತ್ರಜ್ಞ, ಕುಲಪತಿ, ಪ್ರಾಧ್ಯಾಪಕರಾಗಿದ್ದ ರಾಧಾಕೃಷ್ಣನ್ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಆದ್ದರಿಂದಲೇ ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸ ಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕರು ಇಲ್ಲದಿದ್ದರೆ ವೈದ್ಯರು, ವಿಜ್ಞಾನಿಗಳು ಸೇರಿದಂತೆ ಯಾರೂ ಇರುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಮನಸ್ಸಿನಿಂದ ಹಾಗೂ ಹೃದಯದಿಂದ ಮಾತನಾಡುವುದನ್ನು ಕಲಿಸಬೇಕು. ಓದಿನ ಜೊತೆಗೆ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿ ಅವರು, ಶಿಕ್ಷಕ ವೃತ್ತಿಗೆ ತನ್ನದೆ ಆದ ಗೌರವವಿದೆ. ಒಬ್ಬ ವಿದ್ಯಾರ್ಥಿ ಒಳ್ಳೆಯವನಾಗಲು ಅಥವಾ ಕೆಟ್ಟವನಾಗಲು ಶಿಕ್ಷಕರು ಕೂಡ ಕಾರಣರು ಎಂದು ತಿಳಿಸಿದರು.
ಅಂದಿನ ಹಾಗೂ ಇಂದಿನ ಶಿಕ್ಷಣಕ್ಕೆ ವ್ಯತ್ಯಾಸವಿದೆ. ಹಿಂದೆ ವಿದ್ಯಾರ್ಥಿಗಳು ಗಮನವಿಟ್ಟು ಕಲಿಯುತ್ತಿದ್ದರು. ಈಗ ಅಂತಹ ವಾತಾವರಣವಿಲ್ಲ. ಆದರೂ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಿಕ್ಷಕರಾದ ಪುಟ್ಟರಾಜು, ಎನ್. ರಾಘವೇಂದ್ರ, ಡಿ.ಸಿ.ಛಾಯಾ, ಎ.ಬಿ.ರಾಘವೇಂದ್ರ ಅವರನ್ನು ಶಾಲು ಹೊದಿಸಿ ನೆನಪಿ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಜಿಲ್ಲಾ ಕುಂಬಾರರ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾದ ರಾಜೇಂದ್ರ, ಉಪಾಧ್ಯಕ್ಷ ಶಿವಣ್ಣ ಶೆಟ್ಟಿ, ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಕುಂಬಾರರ ಸಂಘದ ಗೌರವಾಧ್ಯಕ್ಷ ಚಾಮರಾಜು, ಉಪಾಧ್ಯಕ್ಷರಾದ ರಮೇಶ್, ಬಿಸಲವಾಡಿ ಸಿದ್ದಮಲ್ಲು, ಮಾದಲವಾಡಿ ಮಹದೇವಶೆಟ್ಟಿ ಇತರರಿದ್ದರು.
