ಹನೂರು: “ಭೌಗೋಳಿಕವಾಗಿ ಅತ್ಯಂತ ದೊಡ್ಡದಾದ ಹನೂರು ತಾಲೂಕಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಮುಕ್ತಿ ನೀಡುತ್ತೇನೆ. ಅದರಲ್ಲೂ ಶಿಕ್ಷಕರ ಸಮಸ್ಯೆಗಳಿಗೆ ಮೊದಲ ಆದ್ಯತೆ” ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
“ನಿಮ್ಮ ಸಂಘದ ಪದಾಧಿಕಾರಿಗಳು ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನಿಮ್ಮ ಬಹುದಿನದ ಬೇಡಿಕೆಯಾದ ಸಾರಿಗೆ ಸಮಸ್ಯೆಗೆ ಈಗಾಗಲೇ ಪರಿಹಾರ ಕಂಡುಕೊಂಡಿದ್ದೇವೆ. ಕಳೆದ ತಿಂಗಳಷ್ಟೇ ಹನೂರು ತಾಲೂಕಿಗೆ ಸ್ವಂತ ಬಸ್ ಡಿಪೋಗೆ ಚಾಲನೆ ನೀಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಸಾರಿಗೆ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ.
ಜೊತೆಗೆ ನಿಮ್ಮ ಬಹುದಿನದ ಕನಸಾದ ಗುರುಭವನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲೇ ನಿರ್ಮಾಣ ಮಾಡುವ ಚಿಂತನೆ ಮಾಡಿದ್ದೇನೆ. ಗುರುಗಳಿಗೆ ಸೂರು ಕಲ್ಪಿಸುವುದು ನನ್ನ ಜವಾಬ್ದಾರಿ” ಎಂದರು.
ಸರ್ಕಾರಿ ಶಾಲೆಯ ಶಿಕ್ಷಕರೇ ಶ್ರೇಷ್ಠ:
“ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಉತ್ತಮ, ಅನುಭವಿ ಶಿಕ್ಷಕರಿದ್ದಾರೆ. ನಿಮ್ಮ ಶ್ರಮದಿಂದಲೇ ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಲಿಕೆಯಲ್ಲಿ ಮುಂದಿವೆ. ನೀವು ಮಕ್ಕಳಿಗೆ ಕೇವಲ ಪಾಠ ಮಾತ್ರವಲ್ಲ, ಉತ್ತಮ ಸಂಸ್ಕಾರ, ಭವಿಷ್ಯವನ್ನು ಕಲಿಸಿ” ಎಂದು ಶಿಕ್ಷಕರನ್ನು ಕೊಂಡಾಡಿದರು.
ಮುಖ್ಯ ಭಾಷಣಕಾರ ಉಪನ್ಯಾಸಕ ನಾಗರಾಜ್ ಮಾತನಾಡಿ, “ಶಿಕ್ಷಣ ಇಲಾಖೆ ಎಲ್ಲ ಇಲಾಖೆಗಳಿಗಿಂತ ಮಾದರಿ. ಹನೂರು ಎಂದರೆ ಜನಪದಗಳ ತವರೂರು. ಕೊರೊನಾ ನಂತರ ಮಕ್ಕಳ ಕೈಗೆ ಮೊಬೈಲ್ ಬಂದು ಶಿಕ್ಷಣದ ಗುಣಮಟ್ಟ ಕುಸಿದಿದೆ. ಈ ಸಂಕಷ್ಟದ ಕಾಲದಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳನ್ನು ರಕ್ಷಿಸಿ, ಸಂಸ್ಕಾರ ಕಲಿಸುವ ಮಹಾನ್ ಕಾಯಕವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಪಾಠದ ಜೊತೆಗೆ ಒಳ್ಳೆಯ ಬುದ್ಧಿ ಕಲಿಸಿ” ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಬಿಇಒ ಪ್ರತಿಭಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾದೇಶ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಬಿಆರ್‌ಸಿ ವೆಂಕಟೇಶ್ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ನೂರಾರು ಶಿಕ್ಷಕರು ಉಪಸ್ಥಿತರಿದ್ದರು.
