ದೇಶದ ಸತ್ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ : ಶಾಸಕ ಎ.ಆರ್. ಕೃಷ್ಣಮೂರ್ತಿ

ಚಾಮರಾಜನಗರ: ಮಣ್ಣಿನ ಮುದ್ದೆಯಂತಿರುವ ಮಕ್ಕಳಲ್ಲಿ ಸಂಸ್ಕಾರ ಗುಣಗಳನ್ನು ತುಂಬಿ ಸಮಾಜದ ಹಾಗೂ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಕೊಳ್ಳೇಗಾಲ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.

   ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮತ್ತು ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

   ದೇಶದ ಅತ್ಯುತ್ತಮ ಶಿಕ್ಷಕರು, ಶಿಕ್ಷಣ ತಜ್ಞರು ಹಾಗೂ ಉಪರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಹಾಗೂ ಮಹಾತ್ಮ ಜ್ಯೋತಿಬಾ ಪುಲೆ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ರಾಜ್ಯವು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸರ್ಕಾರವು ಆದರ್ಶ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ವಸತಿ ಶಾಲೆಗಳನ್ನು ರಾಜ್ಯಾದ್ಯಂತ ತೆರೆದಿದೆ. ಇಂದಿನ ಶಿಕ್ಷಕರು ಡಾ. ರಾಧಾಕ್ರಷ್ಣನ್ ಅವರನ್ನು ಮಾದರಿಯಾಗಿಸಿಕೊಳ್ಳಬೇಕು.      ಫಲಿತಾಂಶಗಳು ಏರುಪೇರಾದರೂ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

   ಕಾರ್ಯಕ್ರಮ ಉದ್ಘಾಟಿಸಿದ ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತ ಬಹಳ ಶ್ರೇಷ್ಠ ವೃತ್ತಿಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದ್ದು, ಶಿಕ್ಷಕರು ಮಕ್ಕಳ ಶಿಲ್ಪಿಗಳಾಗಿದ್ದಾರೆ. ಜೀವನಪಾಠದ ಜೊತೆಗೆ ಶಿಸ್ತನ್ನು ಕಲಿಸುವ ಪ್ರಾಥಮಿಕ ಶಿಕ್ಷಕರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಶಿಕ್ಷಕರಿಗೆ ಗೌರವದ ಸ್ಥಾನಮಾನಗಳಿವೆ. ಅದಕ್ಕೆ ಚ್ಯುತಿ ಬರದಂತೆ ಶಿಕ್ಷಕರು ತಮ್ಮ ನಡವಳಿಕೆಯನ್ನು ಉತ್ತಮಪಡಿಕೊಳ್ಳಬೇಕು. ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಕ್ಕಳಿಗೆ ಶಿಕ್ಷಣ ನೀಡಿ ಭವ್ಯಭಾರತದ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು. 

   ಭೋಗಾಪುರ ವಸತಿಸಹಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ದೇವರಾಜು ಅವರು ಮುಖ್ಯ ಭಾಷಣ ಮಾಡಿ ಭೌತಿಕ, ಭಾವನಾತ್ಮಕ ಬುದ್ದಿಜೀವಿಗಳಾಗಿರುವ ಇಂದಿನ ಶಿಕ್ಷಕರು ಸಮಾಜವನ್ನು ಮುನ್ನೆಡೆಸುವ ಸಮಾಜಮುಖಿಗಳಾಗಬೇಕು. ಮಕ್ಕಳನ್ನು ಸ್ಪರ್ಧೆಗಳಿಗೆ ಸೃಷ್ಠಿಮಾಡುವ ಶಿಕ್ಷಕರಾಗದೇ ಏಕಲವ್ಯ, ಜ್ಯೋತಿಬಾ ಪುಲೆ, ಸಾವಿತ್ರಿ ಬಾಪುಲೆ, ಅಂಬೇಡ್ಕರಂತವರನ್ನು ಸೃಷ್ಠಿ ಮಾಡುವ ಶಿಕ್ಷಕರು ಇಂದು ಬೇಕಾಗಿದೆ. ಶಿಕ್ಷಕರು ನತದೃಷ್ಠ ಸಮಾಜವನ್ನು ಮುಖ್ಯವಾಹಿನಿಗೆ ತರುವ ಬದ್ಧತೆ ರೂಢಿಸಿಕೊಳ್ಳಬೇಕು. ಶಿಕ್ಷಕರು ತಮ್ಮಲ್ಲಿರುವ ಒತ್ತಡವನ್ನು ಮೆಟ್ಟಿನಿಂತು ಸಕಾರಾತ್ಮಕ ಅಂಶಗಳನ್ನು ಮಕ್ಕಳಲ್ಲಿ ಬಿತ್ತಿ ಜಾಗೃತಗೊಳಿಸಬೇಕು. ಶಿಕ್ಷಕರು ಮುಕ್ತವಾಗಿ ಕೆಲಸ ಮಾಡುವ ಅವಕಾಶ ಸೃಷ್ಠಿಸಿಕೊಳ್ಳಬೇಕು ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ವಹಿಸಿದ್ದರು. ಕಾರ್ಯಕ್ರಮದ ಮಹತ್ವದ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್ ಅವರು ಮಾನಾಡಿದರು.

   ಇದೇ ವೇಳೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.  

   ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಪ್ರಾಥಮಿಕ, ಪ್ರೌಢಶಾಲೆಯ ಜಿಲ್ಲಾ ಹಾಗೂ ತಾಲೂಕು ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *