
ಚಾಮರಾಜನಗರ, ಸೆಪ್ಟೆಂಬರ್ 05 (ಕರ್ನಾಟಕ ವಾರ್ತೆ):- ಅರ್ಜುನನಿಗೆ ಭಗವದ್ಗೀತೆಯ ಸಾರವನ್ನು ಬೋಧಿಸುವ ಮೂಲಕ ಇಡೀ ಜಗತ್ತಿಗೆ ಮಾನವ ಪ್ರೇಮದ ಮಹತ್ವವನ್ನು ತಿಳಿಸಿಕೊಟ್ಟವನು ಶ್ರೀಕೃಷ್ಣ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ತಿಳಿಸಿದರು.
ನಗರದ ಚಾಮರಾಜೇಶ್ವರ ದೇವಾಲಯ ಬಳಿ ಇರುವ ರಥದ ಬೀದಿಯಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿಂದು ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಗಳ ಆರಾಧ್ಯದೈವ ಶ್ರೀಕೃಷ್ಣ ವಿಷ್ಣುವಿನ 10 ಅವತಾರಗಳಲ್ಲಿ 8ನೇ ಅವತಾರವಾಗಿದ್ದಾನೆ. ದ್ವಾಪರ ಯುಗದಲ್ಲಿ ತಾಂಡವವಾಡುತ್ತಿದ್ದ ಅಧರ್ಮ, ಅನೀತಿಯನ್ನು ಕಿತ್ತೊಗೆದ ಶ್ರೀಕೃಷ್ಣ ದುಷ್ಟ ಸಂಹಾರಕ್ಕಾಗಿ ಜನಿಸಿದನು. ಮಹಾಭಾರತದ ಯುದ್ಧದಲ್ಲಿ ವಿಮುಖನಾಗಿದ್ದ ಅರ್ಜುನನಿಗೆ ಭಗವದ್ಗೀತೆಯ ಸಾರ ಪಠಿಸಿ ಹುರುದುಂಬಿಸಿದ ಶ್ರೀಕೃಷ್ಣನ ಸಂದೇಶದಲ್ಲಿ ಮಾನವ ಪ್ರೇಮ ಹಾಗೂ ಮಾನವ ಕಲ್ಯಾಣವೇ ಮುಖ್ಯವಾಗಿದೆ ಎಂದು ಮರಿಸ್ವಾಮಿ ಅವರು ತಿಳಿಸಿದರು.
ಮುಖ್ಯಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಅವರು ಮಾತನಾಡಿ ತ್ರೇತಾಯುಗದ ಶ್ರೀರಾಮ ಹಾಗೂ ದ್ವಾಪರ ಯುಗದ ಶ್ರೀಕೃಷ್ಣ ಭಾರತದ ಆಧ್ಯಾತ್ಮಿಕ, ತತ್ವಶಾಸ್ತ್ರ ಹಾಗೂ ರಾಜತಾಂತ್ರಿಕತೆಯ ದಿವ್ಯ ಪ್ರತಿಭೆಗಳು ಮತ್ತು ಆಧಾರಸ್ತಂಭಗಳಾಗಿದ್ದಾರೆ. ಮಾನವ ದ್ವಂದ್ವಗಳನ್ನು ಪರಿಹರಿಸಿ ಬಾಯಲ್ಲಿ ಬ್ರಹ್ಮಾಂಡ ಸೃಷ್ಠಿಸಿದವನು ಶ್ರೀಕೃಷ್ಣ. ಮಹಾಭಾರತದ ಇಡೀ ಚಿತ್ರಣವನ್ನು ಇಡೀ ವಿಶ್ವಕ್ಕೆ ಅನಾವರಣಗೊಳಿಸಿದ ಶ್ರೀಕೃಷ್ಣ ಮಾನವ ಧರ್ಮ ರಕ್ಷಣೆಯ ಮಾರ್ಗ ತೋರಿದರು. ಭಗವದ್ಗೀತೆಯ ಸಾರದಲ್ಲಿ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಅಡಗಿದೆ. ಅದರ ವಾಸ್ತವ ಸಂಗತಿಯನ್ನು ಜಗತ್ತಿಗೆ ಉಣಬಡಿಸಿದವನು ಶ್ರೀಕೃಷ್ಣನೇ ಆಗಿದ್ದಾನೆ ಎಂದರು.
ಮನುಷ್ಯರು ತಮ್ಮ ಜೀವನದುದ್ದಕ್ಕೂ ಧರ್ಮ ಪಾಲನೆ ಹೇಗೆ ಮಾಡಬೇಕು ಎಂಬುದನ್ನು ಸಾರಿ ಹೇಳಿದ ಶ್ರೀಕೃಷ್ಣ ಸ್ನೇಹ, ಬಂಧುತ್ವದ ಪಾವಿತ್ರ್ಯತೆಯನ್ನು ಜನರಿಗೆ ಮನವರಿಕೆ ಮಾಡಿದನು. ಬಡವನಾಗಿದ್ದ ಸುಧಾಮನ ಸ್ನೇಹಕ್ಕೆ ಮಾರುಹೋಗಿ ಅತ್ಯಂತ ಎತ್ತರಕ್ಕೆ ಕೊಂಡೊಯ್ದ ಶ್ರೀಕೃಷ್ಣನ ಜಯಂತಿಯನ್ನು ಸರ್ಕಾರದ ವತಿಯಿಂದ ಅಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಯುವ ಸಮುದಾಯಕ್ಕೆ ಶ್ರೀಕೃಷ್ಣನ ತತ್ವಾದರ್ಶ ಚಿಂತನೆಗಳು ಪ್ರಸ್ತುತವಾಗಿವೆ. ಶ್ರೀಕೃಷ್ಣನ ಮಾದರಿ ರಾಜತಾಂತ್ರಿಕತೆಯನ್ನು ಇಂದು ಸಾಕಷ್ಟು ದೇಶಗಳು ಅಳವಡಿಸಿಕೊಂಡಿವೆ ಎಂದು ಋಗ್ವೇದಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಅಂದಿನ ಕಾಲದಲ್ಲಿ ಜನರಲ್ಲಿದ್ದ ಅಹಂಕಾರವನ್ನು ಹೋಗಲಾಡಿಸಿ ಸ್ನೇಹದತ್ತ ಸೆಳೆದ ಶ್ರೀಕೃಷ್ಣನ ಸಹನೆ, ತಾಳ್ಮೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಶ್ರೀಕೃಷ್ಣನ ತತ್ವ ಸಿದ್ದಾಂತಗಳು, ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ದಾರಿದೀಪವಾಗಿವೆ. ಇಂದಿನ ಯುವಕರು ಗುರುಹಿರಿಯರನ್ನು ಗೌರವಿಸುವ ಮೂಲಕ ಶ್ರೀಕೃಷ್ಣ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಶ್ರೀಕೃಷ್ಣನು ಪ್ರಸ್ತುತಪಡಿಸಿದ ಮಾನವ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದರು.
ಇದೇ ವೇಳೆ ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದ ನಗರದ ನೇಹಾ ಸಿ. ಹೆಗಡೆ ಅವರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಬಿ. ಗಿರಿಜಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.