ಚಾಮರಾಜನಗರ: ಸಾರ್ವಜನಿಕರ ಕುಂದುಕೊರತೆ ಸಮಸ್ಯೆ ಅಹವಾಲುಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಪ್ರಜಾಸೇವೆ ಆಂದೋಲನ ಸಭೆಯನ್ನು ಇಂದಿನಿಂದ ಆರಂಭಿಸಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಚಾಮರಾಜನಗರ ತಾಲೂಕು ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಜನತೆಯ ಸಮಸ್ಯೆಗಳನ್ನು ಮನೆ ಬಾಗಿಲಿನಲ್ಲಿಯೇ ಪರಿಹರಿಸುವ ಸದುದ್ದೇಶದಿಂದ ನೂತನವಾಗಿ ಪ್ರಜಾಸೇವೆ ಇಲಾಖೆ ಮೂಲಕ ಪ್ರಜಾಸೇವೆ ಆಂದೋಲನ ಸಭೆಯನ್ನು ರಾಜ್ಯದೆಲ್ಲೆಡೆ ನಡೆಸುತ್ತಿದೆ. ಜಿಲ್ಲೆಯಲ್ಲೂ ಇಂದಿನಿಂದಲೇ ಪ್ರತಿ ಶನಿವಾರ ಪ್ರಜಾಸೇವೆ ಸಭೆ ಆಯೋಜನೆ ಮಾಡಲಾಗುತ್ತಿದ್ದು, ಜನರು ನೇರವಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಮಗೆ ಯಾವ ಇಲಖೆಯಿಂದ ಸಮಸ್ಯೆಯಾಗಿದೆ? ಯಾವ ಸೌಲಭ್ಯಗಳು ಸಿಗಬೇಕಿದೆ ಎಂಬ ಬಗ್ಗೆ ಸಭೆಯಲ್ಲಿಯೇ ನೀಡಬಹುದು ಎಂದರು.
ಸಭೆಯಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಲಾಗುತ್ತದೆ. ಇಲ್ಲಿ ಇತ್ಯರ್ಥವಾಗದ ಸಮಸ್ಯೆಗಳ ಅರ್ಜಿಗಳನ್ನು ಮುಂದಿನ ಹಂತದಲ್ಲಿ ಉನ್ನತ ಅಧಿಕಾರಿಗಳಿಗೆ ಕಳುಹಿಸಿ ಸ್ಪಂದನೆ ನೀಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಸಹ ಸಂಬಂಧಪಟ್ಟವರಿಗೆ ಕಳುಹಿಸಿ ಪರಿಹರಿಸಲಾಗುತ್ತದೆ. ಒಟ್ಟಾರೆ ಜನರ ಕುಂದು ಕೊರತೆಗಳಿಗೆ ಸರ್ಕಾರವೇ ಅವರ ಬಳಿ ಬಂದು ಇತ್ಯರ್ಥ ಮಾಡುವುದು ಪ್ರಜಾಸೇವೆ ಆಂದೋಲನ ಸಭೆಯ ಮುಖ್ಯ ಧ್ಯೇಯವಾಗಿದೆ ಎಂದು ಸಚಿವರು ತಿಳಿಸಿದರು.
ಪ್ರತಿ ತಿಂಗಳ ಮೊದಲನೆ ಹಾಗೂ ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ. ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಸಭೆ ಈಗಾಗಲೇ ನಿಗದಿಯಾಗಿದೆ. ಆಯಾ ಭಾಗದ ಶಾಸಕರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿಯೂ ಜನರು ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಪ್ರಜಾಸೇವೆ ಆಂದೋಲನದಡಿ ಅವಕಾಶ ಮಾಡಿಕೊಟ್ಟಿದೆ ಎಂದರು.
ಸಾಕಷ್ಟು ಪೂರ್ವ ಸಿದ್ದತೆಯೊಂದಿಗೆ ಪ್ರಜಾಸೇವೆ ಸಭೆಯನ್ನು ಆಯೋಜಿಸಲಾಗಿದೆ. ಜನರ ಸಮಸ್ಯೆಗಳನ್ನು ಕೇಳಿ ಆರಂಭದಲ್ಲಿಯೇ ನೊಂದಾಯಿಸಿ ಅರ್ಜಿ ನೀಡಲಾಗುತ್ತಿದೆ. ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಎಂಬುದನ್ನು ಅರ್ಜಿಯಲ್ಲಿಯೇ ನಿಗದಿಪಡಿಸಿ ಸ್ವೀಕರಿಸಲಾಗುತ್ತಿದೆ. ಇದಕ್ಕಾಗಿಯೇ ಅಗತ್ಯವಿರುವಷ್ಟು ಕೌಂಟರ್‍ಗಳನ್ನು ತೆರೆಯಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಸಾರ್ವಜನಿಕರ ಸ್ಪಂದನೆಗಾಗಿ ಸರ್ಕಾರ ಪ್ರಜಾಸೇವೆ ಸೌಲಭ್ಯವನ್ನು ಜಾರಿಗೆ ತಂದಿದೆ. ಜನತೆ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಸಭೆಯ ಆರಂಭಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕು ಪಂಚಾಯತ್ ಆವರಣದಲ್ಲಿ ಮಾಹಿತಿ ನೀಡುವ ಸರ್ಕಾರಿ ಇಲಾಖೆಗಳ ಮಳಿಗೆಗಳನ್ನು ಉದ್ಘಾಟಿಸಿದರು. ಪ್ರಜಾಸೇವೆಗಾಗಿ ಮಾಡಲಾಗಿದ್ದ ಎಲ್ಲ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಸತತ ಆರು ತಾಸುಗಳ ಕಾಲ ಸಚಿವರು ಕುಳಿತು ಸರತಿ ಸಾಲಿನಲ್ಲಿ ಬಂದ ಪ್ರತಿಯೊಬ್ಬರಿಂದಲೂ ಅರ್ಜಿ ಪಡೆದು ಅಹವಾಲುಗಳನ್ನು ಆಲಿಸಿದರು. ವಿವರವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದರು.
ಖಾತೆ ಬದಲಾವಣೆ, ಕುಡಿಯುವ ನೀರು, ಪಡಿತರ ಚೀಟಿ, ನಿವೇಶನ, ವಸತಿ, ಬ್ಯಾಂಕಿನಿಂದ ಸಾಲ ಸೌಲಭ್ಯ, ಪಿಂಚಣಿ, ಪಟ್ಟಣ ಗ್ರಾಮಗಳಿಗೆ ಆಗಬೇಕಿರುವ ಅಭಿವೃದ್ದಿ ಕಾಮಗಾರಿಗಳು, ರಸ್ತೆ, ಇನ್ನಿತರ ಮೂಲ ಸೌಲಭ್ಯಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ತಹಶೀಲ್ದಾರ್ ಗಿರಿಜಾ, ಇತರರು ಸಭೆಯಲ್ಲಿ ಇದ್ದರು.
ಪ್ರಜಾಸೇವೆ ಆಂದೋಲನದ ಚೊಚ್ಚಲ ಸಭೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಲೂಕು ಪಂಚಾಯತ್ ಸಭಾಂಗಣ ಕಿಕ್ಕಿರಿದು ತುಂಬಿತ್ತು. ತಾಲೂಕು ಪಂಚಾಯತ್ ಆವರಣದಲ್ಲಿ ತೆರೆಯಲಾಗಿದ್ದ ಕೌಂಟರ್‍ಗಳಲ್ಲಿಯೂ ಸಹ ನಿರೀಕ್ಷೆಗೂ ಮೀರಿ ಜನರು ನೊಂದಾಯಿಸುತ್ತಿದ್ದು ಕಂಡುಬಂತು. ಸಂಜೆ 4 ಗಂಟೆಯವರೆಗೂ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು.