ಸಚಿವ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಲೇಖನ
“ಪ್ರಜಾಪ್ರಭುತ್ವದ ಆಧುನಿಕ ಅನುಭವ ಮಂಟಪವೇ ಈ ಪ್ರಜಾಸೇವಾ ಇಲಾಖೆ – ನುಡಿದಂತೆ ನಡೆಯುತ್ತಿರುವ ಜನಪರ ಸರ್ಕಾರ”
“ಪ್ರತಿ ಶನಿವಾರ ನಿಮ್ಮೂರಿಗೆ ಸಚಿವರು, ಶಾಸಕರು, DC, CEO, ತಹಶೀಲ್ದಾರ್ – 1902 ಗೆ ಕರೆ ಮಾಡಿದರೆ 24 ಗಂಟೆ ಪರಿಹಾರ”
ಪ್ರಜಾಸೇವಾ ಆಂದೋಲನದಿಂದ ಮನೆಬಾಗಿಲಿಗೆ ಆಡಳಿತ; ಕಾಲಮಿತಿಯಲ್ಲಿ ನೈಜ ಪರಿಹಾರವೇ ಡಿಕೆಶಿ ಸರ್ಕಾರದ ಗುರಿ
ಪ್ರಜಾಪ್ರಭುತ್ವದ ನಿಜವಾದ ಯಶಸ್ಸು ಅಡಗಿರುವುದು ಪ್ರಜೆಗಳು ಸರ್ಕಾರದ ಕಚೇರಿಗಳನ್ನು ಹುಡುಕಿಕೊಂಡು ಬರುವುದರಲ್ಲಲ್ಲ, ಬದಲಾಗಿ ಪ್ರಜೆಗಳ ಸಂಕಷ್ಟಗಳಿಗೆ ಸ್ಪಂದಿಸಲು ಇಡೀ ಆಡಳಿತ ಯಂತ್ರವೇ ಜನರ ಮನೆಬಾಗಿಲಿಗೆ ತೆರಳುವುದರಲ್ಲಿ.
ಸ್ವತಂತ್ರ ಭಾರತದ ಹಾಗೂ ಕರ್ನಾಟಕದ ಆಡಳಿತ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡು ‘ಪ್ರಜಾಸೇವಾ ಇಲಾಖೆ’ ಎಂಬ ಸ್ವತಂತ್ರ ಇಲಾಖೆಯನ್ನು ಸ್ಥಾಪಿಸಿದೆ. ಇದು ನವಯುಗದ ಆಡಳಿತ ಕ್ರಾಂತಿಗೆ ನಾಂದಿ. ಜನಸಾಮಾನ್ಯರು, ರೈತರು, ದೀನದಲಿತರು, ಕೂಲಿಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರ ಧ್ವನಿಯನ್ನು ಆಲಿಸಿ, ಅವರ ಸಂಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಿಂದ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ‘ನುಡಿದಂತೆ ನಡೆದಿದ್ದೇವೆ’ ಎಂಬ ಬದ್ಧತೆಯೊಂದಿಗೆ ಆಡಳಿತದ ಶಕ್ತಿಯನ್ನು ನೇರವಾಗಿ ಜನರ ಕೈಗಿಡುವ ಐತಿಹಾಸಿಕ ಪ್ರಯತ್ನವಿದು.
ಸರ್ಕಾರಿ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡುವುದು, ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾಯುವುದು ಪ್ರಜಾಪ್ರಭುತ್ವದ ಘನತೆಗೆ ಶೋಭೆಯಲ್ಲ. ಈ ದುಸ್ಥಿತಿಯನ್ನು ಹೋಗಲಾಡಿಸಲು ‘ಜನಸ್ಪಂದನ’ ವ್ಯವಸ್ಥೆಯನ್ನು ತಳಮಟ್ಟದವರೆಗೆ ಬಲಪಡಿಸಿ, ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ನಾಗರಿಕರ ಸಮಸ್ಯೆಗಳಿಗೆ ಕಟ್ಟುನಿಟ್ಟಿನ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವುದು ಈ ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ನಿಮ್ಮೂರಿಗೆ ಬರಲಿದ್ದಾರೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು:
ಹೊಸ ರೂಪುರೇಷೆಯ ಪ್ರಕಾರ, ಇಡೀ ರಾಜ್ಯಾದ್ಯಂತ ಪ್ರತಿ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ‘ಪ್ರಜಾಸೇವಾ ಅಭಿಯಾನ’ದ ಸಭೆಗಳು ನಿರಂತರವಾಗಿ ನಡೆಯಲಿವೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರಗಳಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳು ನಡೆಯಲಿವೆ. ಆ ದಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಹಾಜರಿದ್ದು, ಜನರ ಅಹವಾಲುಗಳನ್ನು ಖುದ್ದು ಆಲಿಸಲಿದ್ದಾರೆ.
ಪಾರದರ್ಶಕ ವ್ಯವಸ್ಥೆ: ಸಭೆಯ ಬಗ್ಗೆ 15 ದಿನ ಮುಂಚಿತವಾಗಿಯೇ ಮನೆಮನೆಗೆ ಕರಪತ್ರ, ಪೂರ್ವಮುದ್ರಿತ ಅರ್ಜಿ ನಮೂನೆ ತಲುಪಿಸಲಾಗುತ್ತದೆ. AI ಆಧಾರಿತ ಕಾಲ್ ಸೆಂಟರ್ ಮೂಲಕ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಮೊದಲೇ ಅರ್ಜಿ ಸಲ್ಲಿಸಬಹುದು. ಸಭಾ ಸ್ಥಳದಲ್ಲೇ ಲ್ಯಾಪ್‌ಟಾಪ್, ಪ್ರಿಂಟರ್, ಇಂಟರ್ನೆಟ್ ಸೌಲಭ್ಯವುಳ್ಳ ‘ಗ್ರಾಮ ಒನ್’ ವಿಶೇಷ ಮಳಿಗೆಗಳಿದ್ದು, ಆನ್‌ಲೈನ್‌ನಲ್ಲಿ ಅಹವಾಲು ದಾಖಲಿಸಿ, Real-time tracking ಮೂಲಕ ಪ್ರಗತಿ ತಿಳಿಯಬಹುದು.
ಸಭಾ ಸ್ಥಳದಲ್ಲಿ ಎರಡು ಸರತಿಗಳಿರುತ್ತವೆ – ಹೊಸ ಅರ್ಜಿಗಳ ಸರತಿ ಮತ್ತು ‘ಸಕಾಲ’ದಲ್ಲಿ 21 ದಿನ ಕಳೆದರೂ ಇತ್ಯರ್ಥವಾಗದ ಬಾಕಿ ಅರ್ಜಿಗಳ ಸರತಿ. ಬಾಕಿ ಅರ್ಜಿಗಳಿಗೆ ಮೊದಲ ಆದ್ಯತೆ. ಸ್ಥಳದಲ್ಲೇ ಅರ್ಹರಿಗೆ ಆದೇಶ ಪತ್ರ, ಮಂಜೂರಾತಿ ಪತ್ರ ನೀಡಿ ನ್ಯಾಯ ಒದಗಿಸಲಾಗುತ್ತದೆ.
3 ಹಂತದ ಪರಿಶೀಲನೆ – ಬುಧವಾರವೇ ಫೈಸಲಾ ದಿನ: ಅರ್ಜಿಗಳು ಧೂಳು ಹಿಡಿಯದಂತೆ ಪ್ರತಿ ಬುಧವಾರ 3 ಹಂತದ ಪರಿಶೀಲನೆ – ಬೆಳಗ್ಗೆ 9-11ಕ್ಕೆ ತಹಶೀಲ್ದಾರ್, ಇಒ ನೇತೃತ್ವದಲ್ಲಿ ತಾಲೂಕು ಮಟ್ಟ, 11-1ಕ್ಕೆ AC ಮಟ್ಟದಲ್ಲಿ, ಮಧ್ಯಾಹ್ನ 3-5ಕ್ಕೆ DC ಮಟ್ಟದಲ್ಲಿ ಪರಿಶೀಲನೆ. ಈ ಕಾರಣಕ್ಕೆ ಬುಧವಾರ ಮತ್ತು ಶನಿವಾರ ಬೇರೆ ಯಾವುದೇ ಆಡಳಿತಾತ್ಮಕ ಸಭೆಗಳನ್ನು ನಡೆಸುವುದನ್ನು ಸರ್ಕಾರ ನಿಷೇಧಿಸಿದೆ.
ತಳಮಟ್ಟದಲ್ಲಿ ವಿಲೇವಾರಿಯಾಗದ ಅರ್ಜಿಗಳು ಸ್ವಯಂಚಾಲಿತವಾಗಿ ಕಾರ್ಯದರ್ಶಿಗಳ ಪೋರ್ಟಲ್‌ಗೆ ಹೋಗುತ್ತವೆ. ಪ್ರತಿ ಜಿಲ್ಲೆಗೂ ಹಿರಿಯ IAS ಅಧಿಕಾರಿಯನ್ನು ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ, ಸ್ವತಃ ಮುಖ್ಯಮಂತ್ರಿಗಳೇ ಜಿಲ್ಲಾವಾರು ಪರಿಶೀಲನಾ ಸಭೆ ನಡೆಸಲಿದ್ದಾರೆ. 1902 ಉಚಿತ ಸಹಾಯವಾಣಿ ಮೂಲಕ 24 ಗಂಟೆಯೂ ದೂರು ದಾಖಲಿಸಲು ಅವಕಾಶವಿದೆ.
ಪ್ರಜಾಪ್ರಭುತ್ವದ ಅನುಭವ ಮಂಟಪ: ಬಸವಣ್ಣನವರ ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ‘ಅನುಭವ ಮಂಟಪ’ವು ಸರ್ವರಿಗೂ ಸಮಾನ ಅವಕಾಶ ನೀಡಿದಂತೆ, ಇಂದಿನ ‘ಪ್ರಜಾಸೇವಾ ಇಲಾಖೆ’ಯು ಜನರ ಅಹವಾಲು ಆಲಿಸುವ ಆಧುನಿಕ ಅನುಭವ ಮಂಟಪವಾಗಿ ಕಾರ್ಯನಿರ್ವಹಿಸಲಿದೆ. ಗ್ಯಾರಂಟಿ ಜಾರಿಯ ಮೂಲಕ ನುಡಿದಂತೆ ನಡೆದಿರುವ ನಮ್ಮ ಸರ್ಕಾರಕ್ಕೆ ಪ್ರಜಾಸೇವಾ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆ.
- ಎನ್. ಚಲುವರಾಯಸ್ವಾಮಿ, ಜಲಸಂಪನ್ಮೂಲ ಸಚಿವರು
