ಚಾಮರಾಜನಗರ: ಗ್ರಾಮಗಳ ಸವಾರ್ಂಗೀಣ ಅಭಿವೃದ್ಧಿಗೆ ಮುಕ್ತ ಅವಕಾಶ ಕಲ್ಪಿಸುವ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‍ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರಾಯಪೇಟೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಮತ್ತು ಅಡುಗೆ ಕೋಣೆ ಕಾಮಗಾರಿ ಸ್ಥಳದಲ್ಲಿ ಹಾಜರಾತಿ ಪರಿಶೀಲಿಸಿ, ಬಳಿಕ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ವಾಸಿಸುವ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಯೋಜನೆಯು ಮಹತ್ವದ ಪಾತ್ರವಹಿಸುತ್ತದೆ. ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ. ಸಮುದಾಯದ ಸಹಯೋಗದೊಂದಿಗೆ ಗ್ರಾಮಗಳ ಸವಾರ್ಂಗೀಣ ಅಭಿವೃದ್ಧಿಗೆ ಮುಕ್ತ ಅವಕಾಶ ಕಲ್ಪಿಸುವ ಈ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿಇಒ ಅವರು ತಿಳಿಸಿದರು.
ಬಳಿಕ ದೇವಹಳ್ಳಿ, ಬದನಗುಪ್ಪೆ, ಹರದನಹಳ್ಳಿ ಮತ್ತು ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹೆಚ್ಚಿನ ಕೂಲಿಕಾರರಿಗೆ ಎನ್.ಎಂ.ಆರ್ ಸೃಜನೆ ಮಾಡಿ ಸಕಾಲಕ್ಕೆ ಕೂಲಿ ಪಾವತಿ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ನೊಂದಾಯಿತ ಕುಟುಂಬಕ್ಕೆ 125 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಗ್ರಾಮದ ಜನರು ಉದ್ಯೋಗ ಪಡೆದು ಸ್ವಾವಲಂಬಿಯಾಗಬೇಕು. ಯೋಜನೆಯಡಿ ದಿನದ ಕೂಲಿ ಮೊತ್ತ 382 ರೂ. ಗಳಾಗಿದ್ದು ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತದೆ ಎಂದು ಸಿಇಒ ಅವರು ಮಾಹಿತಿ ನೀಡಿದರು.
ಸೆಪ್ಟೆಂಬರ್ 15 ರವರೆಗೆ ಜಾಬ್ ಕಾರ್ಡ್ ಮೇಳ ನಡೆಯಲಿದ್ದು, ಉದ್ಯೋಗ ಚೀಟಿ ಹೊಂದಿಲ್ಲದ ಕುಟುಂಬಗಳನ್ನು ಗುರುತಿಸಿ ನಮೂನೆ-1 ರಲ್ಲಿ ಬೇಡಿಕೆ ಪಡೆದು ರೋಜ್ ಗಾರ್ ಗ್ಯಾರಂಟಿ ಕಾರ್ಡ್ ವಿತರಿಸಲು ಹಾಗೂ ನಮೂನೆ 6ರಲ್ಲಿ ಉದ್ಯೋಗ ಬೇಡಿಕೆ ಸಂಗ್ರಹಿಸಿ ಆದ್ಯತೆ ಮೇರೆಗೆ ಗ್ರಾಮೀಣ ಜನರಿಗೆ ಉದ್ಯೋಗ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ದುರ್ಬಲ ವರ್ಗದ ಕುಟುಂಬಗಳಿಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು ನಿಯಮಾನುಸಾರ ಸೌಲಭ್ಯ ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಅವರು ತಿಳಿಸಿದರು.
ಸಹಾಯಕ ನಿರ್ದೇಶಕರಾದ ಪ್ರಕಾಶ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಾ, ಮಮತಾ, ಮಹದೇವಸ್ವಾಮಿ, ಮಹೇಶ್ವರಿ, ಶೃತಿ, ತಾಂತ್ರಿಕ ಸಂಯೋಜಕರಾದ ಮಧು, ತಾಲ್ಲೂಕು ಸಂಯೋಜಕರಾದ ಯತೀಶ್, ತಾಲ್ಲೂಕು ಎಂ.ಐ.ಎಸ್ ಸಂಯೋಜಕರಾದ ದೀಪಕ್, ವಸತಿ ನೋಡಲ್ ಅಧಿಕಾರಿ ರವಿ, ತಾಂತ್ರಿಕ ಸಹಾಯಕ ಇಂಜಿನಿಯರ್ ಮನೋಜ್ ಸಾಗರ್, ಮನೋನ್, ಲಿಂಗಪ್ಪ ಇತರರು ಈ ಸಂದರ್ಭದಲ್ಲಿ ಇದ್ದರು.
Related