ಚಾಮರಾಜನಗರ: ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 17 ರಿಂದ 19ರವರೆಗೆ ನಗರದಲ್ಲಿ ಹೆಸರಾಂತ ಚಲನಚಿತ್ರ ನಟರು, ಖ್ಯಾತ ಹಿನ್ನೆಲೆ ಗಾಯಕರಿಂದ ಮ್ಯೂಸಿಕಲ್ ನೈಟ್, ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ನಾಟಕಗಳು ಸೇರಿದಂತೆ ಗಮನಸೆಳೆಯುವ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ದಸರಾ ಆಚರಣೆ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಕ್ಟೋಬರ್ 17ರಂದು ಚಾಮರಾಜೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಮರಾಜನಗರ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು. ಚಾಮರಾಜೇಂದ್ರ ಒಡೆಯರ್ ಜನಿಸಿರುವ ಜನನ ಮಂಟಪದಲ್ಲಿಯೂ ಪೂಜೆ ಸಲ್ಲಿಸಲಾಗುವುದು. ಶ್ರೀ ಚಾಮರಾಜೇಶ್ವರ ದೇವಸ್ಥಾನದ ಉದ್ಯಾನವನದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದರು.
ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರಸಂತೆ ಉದ್ಘಾಟಿಸಲಾಗುವುದು. ಜಿಲ್ಲೆಯ ಹಿರಿಯ ಚಿತ್ರ ಕಲಾವಿದರಿಂದ ವಿವಿಧ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಮಹಿಳಾ ಸ್ವ ಸಹಾಯ-ಸಂಘಗಳ ಉತ್ಪನಗಳ ಮಾರಾಟ ಹಾಗೂ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಗುವುದು. ಸಂಜೆ ದೇವಸ್ಥಾನದ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ ಎಂದು ಸಚಿವರು ತಿಳಿಸಿದರು.
ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿಗೆ ಚಾಲನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿರುವ ಯುವ ಸಂಭ್ರಮ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸ್ಥಳೀಯ ಕಲಾವಿದರಿಂದ ತಂಬೂರಿ ಪದ, ನೀಲಗಾರರಪದ, ವಚನಗಾಯನ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ ಎಂದರು.
ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ದೀಪಾಲಂಕಾರದ ಉದ್ಘಾಟನೆ ನೆರವೇರಲಿದೆ. ದೇವಸ್ಥಾನ ಆವರಣದ ಮುಖ್ಯ ವೇದಿಕೆಯಲ್ಲಿ ಸಂಜೆ 5.30 ಗಂಟೆಗೆ ಖ್ಯಾತ ಚಲನಚಿತ್ರ ನಟರಾದ ರವಿಚಂದ್ರನ್ ಅವರಿಂದ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಖ್ಯಾತ ಹಿನ್ನಲೆ ಗಾಯಕರಾದ ರಾಜೇಶ್ ಕೃಷ್ಣನ್ ಅವರಿಂದ ಮ್ಯುಸಿಕಲ್ ನೈಟ್ ಹಾಗೂ ಬೆಂಗಳೂರು ಕಲಾವಿದರಿಂದ ಬ್ಯಾಂಬೊ ಮ್ಯುಸಿಕಲ್ ಲೈಟ್ ನಡೆಯಲಿದೆ. ಈಗಾಗಲೇ ಹೆಲಿ ಟೂರಿಸಂ ಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಅಕ್ಟೋಬರ್ 18ರಂದು ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮ್ಯಾರಾಥಾನ್ಗೆ ಚಾಲನೆ ನೀಡಲಾಗುವುದು. ದೇವಸ್ಥಾನದ ಆವರಣದ ವೇದಿಕೆಯಲ್ಲಿ ಸಂಜೆ ವೈಯಲಿನ್ ವಿತ್ ಚಂಡೆವಾದನ, ನವೀನ್ ಸಜ್ಜು ಮತ್ತು ತಂಡದವರಿಂದ ಮ್ಯುಸಿಕಲ್ ನೈಟ್, ಡಿ.ಕೆ.ಡಿ ತಂಡದವರಿಂದ ಕರ್ನಾಟಕ ಡ್ಯಾನ್ಸ್ ಡ್ಯಾನ್ಸ್ ನಡೆಯಲಿದೆ. ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಮಾಜಿಕ ನಾಟಕಗಳ ಪ್ರದರ್ಶನ, ಮಹರ್ಷಿ ವಾಲ್ಮೀಕಿ ಭವನದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಚಿವರು ಹೇಳಿದರು.
ಅಕ್ಟೋಬರ್ 19ರಂದು ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದಿಂದ ಪಾರಂಪರಿಕ ನಡಿಗೆಗೆ ಚಾಲನೆ ದೊರೆಯಲಿದೆ. ದೇವಸ್ಥಾನ ಆವರಣದ ವೇದಿಕೆಯಲ್ಲಿ ಸಂಜೆ ಹನುಮಂತು ಮತ್ತು ತಂಡದವರಿಂದ ಜಾನಪದ ವೈಭವ, ರಘುದೀಕ್ಷಿತ್ ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್ ನಡೆಯಲಿದೆ. ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಪ್ರದರ್ಶನ ಇರಲಿದೆ. ಸಂಜೆ ದೇವಸ್ಥಾನ ಆವರಣದ ಮುಖ್ಯ ವೇದಿಕೆಯಲ್ಲಿ ದಸರಾ ಸಮಾರೋಪ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಶಾಸಕರಾದ ಎಂ.ಆರ್. ಮಂಜುನಾಥ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
Related