ಚಾಮರಾಜನಗರ: ಈ ದೇಶದ ಬೆನ್ನುಲುಬು ಆಗಿರುವ ರೈತರು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಲು ಸಮಗ್ರ ವೈಜ್ಞಾನಿಕ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ಅಳವಡಿಸಿಕೊಳ್ಳುವಂತೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಸಲಹೆ ಮಾಡಿದರು.
ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ರೈತ ದಸರಾ ಕಾರ್ಯಕ್ರಮದ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನ್ನದಾತರ ಶ್ರಮಕ್ಕೆ ಬೆಲೆ ಕಟ್ಟಕಟ್ಟಲು ಸಾಧ್ಯವೇ ಇಲ್ಲ, ಈ ನಿಟ್ಟಿನಲ್ಲಿ ರೈತ ಸಾಧಕರನ್ನು ಗೌರವಿಸುವುದು ಹಾಗೂ ದೇಶಿ ತಳಿಗಳನ್ನು ಜನರಿಗೆ ಪರಿಚಯಿಸುವುದು, ರೈತರಿಗೆ ಸಮಗ್ರ ಬೇಸಾಯದ ಕುರಿತು ಜಾಗೃತಿ ಮೂಡಿಸುವುದು ರೈತ ದಸರಾದ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಮಳೆಯಾದರೆ ಮಾತ್ರ ಬೆಳೆ ಎನ್ನುವ ಪರಿಸ್ಥಿತಿ ಇದೆ. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಪರವಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಜಿಲ್ಲೆಯ ರೈತರ ಅಭಿವೃದ್ಧಿಗೆ ಸಾಕಷ್ಟು ನೀರಾವರಿ ಯೋಜನೆಗಳು ಅಗತ್ಯವಾಗಿವೆ. ಇದರಿಂದ ರೈತರ ಬದುಕು ಹಸನಾಗಲಿದೆ ಎಂದರು.
ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ರೈತರ ದಸರಾ ಆಚರಣೆ ಮೂಲಕ ಜಿಲ್ಲೆಯ ರೈತ ಬಾಂಧವರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರಿಗೆ ಕೃಷಿಯಲ್ಲಿ ಪರಿಣತಿ ಹೊಂದಲು ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಹೈನುಗಾರಿಕೆ ಹಾಗೂ ಶ್ವಾನ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸರ್ಕಾರವು ರೈತರ ಬಗ್ಗೆ ಕಾಳಜಿ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ. ರೈತ ದಸರಾ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣಗಳು, ವಿವಿಧ ತಳಿಯ ಭತ್ತದ ಬಿತ್ತನೆ ಬೀಜಗಳ ಬಗ್ಗೆ ರೈತರು ಹೆಚ್ಚಿನ ಅರಿವು ಹೊಂದಿ ಕೃಷಿ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ರೈತ ಮುಖಂಡರಾದ ಹೊನ್ನೂರು ಬಸವಣ್ಣ ಹಾಗೂ ಕೊತ್ತನೂರು ಷಣ್ಮುಗಸ್ವಾಮಿ ಅವರು ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳು, ಪರಿಹಾರೋಪಾಯಗಳು ಹಾಗೂ ನೀರಾವರಿ ಯೋಜನೆಗಳ ಅಗತ್ಯ, ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ಕುರಿತು ಮಾತನಾಡಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಹೆಚ್ಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಜಂಟಿ ಕೃಷಿ ನಿರ್ದೇಶಕರಾದ ಭಾನುಪ್ರಕಾಶ್, ರೈತ ಮುಖಂಡರಾದ ಮಾಡ್ರಹಳ್ಳಿ ಪಾಪಣ್ಣ, ಮಹಿಮಾ ಪ್ರಸಾದ್, ಶೈಲೇಂದ್ರ, ಕೊಡಸೋಗೆ ಮಹದೇವಸ್ವಾಮಿ, ಮಂಜುಳ, ಶಾಂತಪ್ಪ, ರಾಜೇಂದ್ರ, ರವಿ, ಶಿವಮೂರ್ತಿ, ನಾಗಪ್ಪ, ಚಿಕ್ಕಸ್ವಾಮಿ ಕೃಷಿಕ ತಾಲೂಕು ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಲಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ರೈತ ದಸರಾ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಯಂತ್ರೋಪಕರಣಗಳು ಹಾಗೂ ವಿವಿಧ ತಳಿಯ ಹಸು ಕರುಗಳು, ಕುರಿ ಮೇಕೆಗಳ ವಿವಿಧ ಮಳಿಗೆಗಳನ್ನು ಗಣ್ಯರು ಉದ್ಘಾಟಿಸಿದರು.