- ಜಿಎಸ್‌ಎಸ್ ಸಮೂಹ ಸಂಸ್ಥೆಗಳ ವತಿಯಿಂದ ಗೌರವ
- ಸಮಾರಂಭದಲ್ಲಿ ಹಲವು ಹಿರಿಯ ಪತ್ರಕರ್ತರು ಭಾಗಿ
ಮೈಸೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ನಾಡಿನ ಪ್ರತಿಭಾವಂತ ಪತ್ರಕರ್ತರನ್ನು ಗುರುತಿಸಿ ನೀಡಲಾಗುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಸಾಧಕ ಪತ್ರಕರ್ತರಿಗೆ ಜಿಎಸ್‌ಎಸ್ ಸಮೂಹ ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕುವೆಂಪುನಗರದಲ್ಲಿರುವ ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ರಾಜಕೀಯ ವಿಮರ್ಶೆಗೆ(ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆದ ದಯಾಶಂಕರ ಮೈಲಿ(ಸುದ್ದಿಮೂಲ), ಅತ್ಯುತ್ತಮ ಅಪರಾಧ ವರದಿಗೆ ಗಿರಿಧರ್ ಪ್ರಶಸ್ತಿ ಪಡೆದ ಪಿ.ಕೆ. ರವಿಕುಮಾರ್(ವಿಜಯವಾಣಿ), ವನ್ಯ ಪ್ರಾಣಿಗಳ ವರದಿಗೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಪಡೆದ ನಾಗರಾಜ್ ನವೀಮನೆ (ವಿಜಯ ಕರ್ನಾಟಕ) ಹಾಗೂ ಅತ್ಯುತ್ತಮ ಪುಟ ವಿನ್ಯಾಸಗಾರ ಪ್ರಶಸ್ತಿ ಪಡೆದ ಸಂದೇಶ್(ಪ್ರತಿನಿಧಿ) ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಪತ್ರಕರ್ತರು ಸದಾಕಾಲವೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಸನ್ಮಾನಿಸಿರುವುದು ನಮಗೆ ನಾವೇ ಗೌರವಿಸಿಕೊಂಡಂತೆ. ಇಂತಹ ಸೌಹಾರ್ದಯುತ ವಾತಾವರಣವನ್ನು ಶ್ರೀಹರಿ ಅವರು ಕಲ್ಪಿಸಿಕೊಟ್ಟಿದ್ದಾರೆ. ಈ ಹಿಂದೆಯೂ ಜಿಲ್ಲಾ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭದಲ್ಲೂ ಪ್ರಶಸ್ತಿ ಪುರಸ್ಕೃತರನ್ನು ಶ್ರೀಹರಿ ಅವರು ಸನ್ಮಾನಿಸಿ ಗೌರವಿಸಿದ್ದರು. ದಿನನಿತ್ಯವೂ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಈ ರೀತಿಯಾಗಿ ಸೌಹಾರ್ದಯುತವಾಗಿ ಸೇರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್, ಸಿ.ಕೆ.ಮಹೇಂದ್ರ, ಪ್ರಜಾವಾಣಿ ಪತ್ರಿಕೆ ವರದಿಗಾರ ನರಸಿಂಹಮೂರ್ತಿ, ಬಿಟಿವಿ ವರದಿಗಾರ ಬಿ. ರಾಘವೇಂದ್ರ, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ರಮೇಶ್ ಉತ್ತಪ್ಪ, ವಿಜಯವಾಣಿ ಪತ್ರಿಕೆ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ್, ರಾಜ್ಯ ಧರ್ಮ ಪತ್ರಿಕೆಯ ಸೋಮಶೇಖರ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಟಿವಿ9 ವರದಿಗಾರ ರಾಮ್, ವಿಶ್ವದೂತ ಪತ್ರಿಕೆಯ ಸುಬ್ರಹ್ಮಣ್ಯ, ನ್ಯೂಸ್ ಫಸ್ಟ್ ವರದಿಗಾರ ರವಿ ಪಾಂಡವಪುರ, ನ್ಯೂಸ್ 18 ವರದಿಗಾರ ಆನಂದ್ ಇತರರಿದ್ದರು.
ಮೈಸೂರಿನ ಐವರು ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಸಂತಸದ ಸಂಗತಿ. ಮೈಸೂರು ಪತ್ರಿಕೋದ್ಯಮ ಮತ್ತು ಪತ್ರಕರ್ತರಿಗೆ ಹೆಚ್ಚಿನ ಗೌರವವಿದೆ. ಪ್ರಶಸ್ತಿ ಪಡೆದ ಪತ್ರಕರ್ತರನ್ನು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿದೆ. ಈ ಎಲ್ಲ ಪತ್ರಕರ್ತರು, ಅವರ ಸಾಧನೆಗಳ ಮಾಹಿತಿ ನೀಡುವ ವೆಬ್‌ಸೈಟ್ ಆರಂಭವಿಸುವ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು.
ಶ್ರೀಹರಿ ದ್ವಾರಕನಾಥ್, ಮುಖ್ಯಸ್ಥ, ಜಿಎಸ್‌ಎಸ್ ಸಮೂಹ ಸಂಸ್ಥೆಗಳು.
—————————————————————————-
ಪ್ರಸ್ತುತ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವುದು ಅತಿ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವ ಮೂಲಕ ಶ್ರೀಹರಿ ಅವರು ನಿಜ ನಾಯಕರಾಗಿದ್ದಾರೆ. ಪ್ರತಿಬಾರಿಯೂ ಪತ್ರಕರ್ತರ ಏಳಿಗೆ, ಪತ್ರಕರ್ತರ ಸಂಘದ ಶ್ರೇಯೋಭಿವೃದ್ದಿಯ ಚಿಂತನೆ, ಆರೋಗ್ಯದ ಬಗ್ಗೆಯೂ ಶ್ರೀಹರಿ ಅವರು ಕಾಳಜಿ ಹೊಂದಿರುವುದು ಸಂತಸದ ಸಂಗತಿ.
ಕೆ. ದೀಪಕ್, ಅಧ್ಯಕ್ಷ,
ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು.